ಬುದ್ಧ
ಕ್ರಿ.ಪೂ.ಸು. 6ನೆಯ ಶತಮಾನ. ಬೌದ್ಧಧರ್ಮ ಸ್ಥಾಪಕ. ಬುದ್ಧ ಎಂಬ ಪದ ವ್ಯಕ್ತಿ ನಿರ್ದೇಶಕವಲ್ಲ. ಬುದ್ಧನೆಂದು ಪ್ರಸಿದ್ಧನಾಗಿರುವ ಈ ವ್ಯಕ್ತಿಗಿಂತ ತುಂಬ ಹಿಂದಿನಿಂದಲೂ ಈ ಪದದ ಬಳಕೆಯಿತ್ತು. ಬುದ್ಧ ಎಂದರೆ ತಿಳಿದವ, ಜ್ಞಾನಿ, ನಿದ್ದೆಯಿಂದ ಎಚ್ಚೆತ್ತವ ಎಂದರ್ಥ. ಬುದ್ಧ ಎಂಬುದು ಒಂದು ಸ್ಥಿತಿಯನ್ನು ಸೂಚಿಸುವ ಪದ, ಆಧ್ಯಾತ್ಮಿಕ ಜಾಗೃತಿ ಪಡೆದವನ ಸ್ಥಿತಿ ಇದರ ಲಕ್ಷ್ಯ.

ಆದರೆ ಇಲ್ಲಿ ಬೌದ್ಧರೆಂಬ ಜನರ ಆದಿಗುರು ಎನಿಸಿದ, ಸಂಪ್ರದಾಯ ಪ್ರವರ್ತಕನಾದ ವ್ಯಕ್ತಿಗೆ ಬುದ್ಧನೆಂಬ ಹೆಸರು ಸಾಮಾನ್ಯವಾಗಿ ರೂಢವಾಗಿದೆ. ಹಿಮಾಲಯದ ಪರಿಸರದಲ್ಲಿದ್ದ ಕೋಸಲ ರಾಜ್ಯಕ್ಕೆ ಸೇರಿದ ಶಾಕ್ಯ ಜನಪದದಲ್ಲಿ ರಾಜಕುಮಾರನಾಗಿ ಕ್ರಿ.ಪೂ.ಸು. ಆರನೆಯ ಶತಮಾನದ ಮಧ್ಯದಲ್ಲಿ ಹುಟ್ಟಿದ ಈ ವ್ಯಕ್ತಿ ತನ್ನ ಪ್ರಯತ್ನದಿಂದ, ತಪಸ್ಸಿನಿಂದ ದೇಶದಲ್ಲಿ ದೊಡ್ಡದೊಂದು ವಿಚಾರಕ್ರಾಂತಿಯನ್ನೇ ಉಂಟು ಮಾಡಿದ. ಈ ಕ್ರ್ರಾಂತಿ ಕಾಲಕ್ರಮದಲ್ಲಿ ಪ್ರಪಂಚಾದ್ಯಂತ ಧ್ವನಿತಗೊಂಡಿತು. ಈತನ ಮೊದಲ ಶಿಷ್ಯರು ಈತನನ್ನು ಬುದ್ಧನೆಂದು ಗೌರವದಿಂದ ಕರೆದರು. ಆ ಹೆಸರೇ ಇಂದಿಗೂ ಉಳಿದಿದೆ, ಜಗತ್ತಿನಲ್ಲೆಲ್ಲ ಪ್ರಸಿದ್ಧವಾಗಿದೆ. ಆದರೆ ಬೌದ್ಧರ ಪ್ರಕ್ರಿಯೆಯಲ್ಲಿ ಹಲವಾರು ಬುದ್ಧರ ಪ್ರಸ್ತಾಪವಿದೆ. ಯೇ ಚ ಬುದ್ಧಾ ಅತೀತಾ ಚ, ಯೇ ದ, ಬುದ್ಧಾ ಅನಾಗತಾ, ಪ್ರತ್ಯುತ್ಪನ್ನಾ ಚ ಯೇ ಬುದ್ಧಾ ಅಹಂ ವಂದಾಮಿ ಸಬ್ಬದಾ ಎಂದು ಎಂದು ನಿತ್ಯವೂ ಬೌದ್ಧರು ಹೇಳುವ ಪ್ರಾರ್ಥನೆ ಅತೀತರಾದ, ಅನಾಗತರಾದ, ಪ್ರತ್ಯುತ್ಪನ್ನರಾದ ಎಲ್ಲ ಬುದ್ಧರಿಗೂ ಸಲ್ಲುತ್ತದೆ. ಈಚಿನ ಮಾನುಷೀ ಬುದ್ಧನೂ ಸೇರಿ ಒಟ್ಟು ಇಪ್ಪತ್ತನಾಲ್ಕು ಬುದ್ಧರೆಂದು ವ್ಯವಹಾರವಿದೆ. ಈ ಕಲ್ಪಾಂತರದಲ್ಲೇ ಕಕುಸಂಧ ಕನಕ್ಬಮುನಿ (ಪಾಳಿಯಲ್ಲಿ ಕೋಣಾಗಮನ) ಕಸ್ಸಪ ಮತ್ತು ಗೌತಮರೆಂಬ ನಾಲ್ಕು ಬುದ್ಧರಿದ್ದರೆಂಬ ಕಲ್ಪನೆಯಿದೆ. ಗೌತಮಬುದ್ಧನನ್ನುಳಿದು ಇತರರು ಚಾರಿತ್ರಿಕ ವ್ಯಕ್ತಿಗಳೇ ಎಂಬುದು ಸ್ಪಷ್ಟವಾಗುವುದಿಲ್ಲ. ಕೋಣಾಗಮನ ಬುದ್ಧನ ಸ್ತೂಪವನ್ನು ಅಶೋಕ ಚಕ್ರವರ್ತಿ ಸಂದರ್ಶಿಸಿದ್ದನೆಂದು ಸ್ತಂಭಶಾಸನವೊಂದರಿಂದ ತಿಳಿದು ಬರುತ್ತದೆ. ಆದರೆ ಹೆಚ್ಚು ವಿವರಗಳು ಉಪಲಬ್ಧವಿಲ್ಲ.

ಈ ಬುದ್ಧನೇನೋ ನಿಸ್ಸಂದೇಹವಾಗಿ ಐತಿಹಾಸಿಕ ವ್ಯಕ್ತಿ. ಇದನ್ನು ಶಂಕಿಸಿರುವ ಪಾಶ್ಚಾತ್ಯ ಪಂಡಿತರೂ ಇದ್ದಾರೆ. ಎಮಿಲ್ ಸೆನಾರ್ಟ್ ಎಂಬ ಫ್ರೆಂಚ್ ವಿದ್ವಾಂಸ ಬುದ್ಧನೆಂಬ ವ್ಯಕ್ತಿ ನಿಜವಾಗಿ ಇರಲೇ ಇಲ್ಲವೆಂದೂ ಬುದ್ಧನ ಕಲ್ಪನೆ ಸೂರ್ಯನ ಸಾಂಕೇತಿಕ ಕಥೆಗೆ ಸಂಬಂಧಪಟ್ಟದ್ದೆಂದು ವಾದಿಸುತ್ತಾರೆ. ಆದಿತ್ಯ ಗೋತ್ರದ ಗೌತಮ (ಗೋ-ತಮ ಎಂದರೆ ಕತ್ತಲೆಯನ್ನು ಸೀಳುವವನು, ಸೂರ್ಯ) ಮಾಯಾ ದೇವಿಯ (ರಾತ್ರಿ) ಗರ್ಭದಿಂದ ಹೊರಬಂದೊಡನೆ ತಾಯಿ ತೀರಿಕೊಳ್ಳುವುದೂ ಕಾರ್ಮೋಡಗಳು ಮರೆಯಾಗುವಂತೆ) ಮಾರನನ್ನು (ಗುಡುಗು ಮಿಂಚುಗಳನ್ನು) ಗೆಲ್ಲುವುದೂ ಧರ್ಮಚಕ್ರ (ಹಗಲು ಉರುಳುವುದನ್ನು) ಪ್ರವರ್ತನ ಮಾಡುವುದೂ ಬರಿಯ ಸಾಂಕೇತಿಕ ಕಥನವೆಂದು ಇವರ ವಾದ. ಆದರೆ ಈ ವಾದದಲ್ಲಿ ಹುರುಳಿಲ್ಲ. ಇಂಥ ವಾದವನ್ನು ಯಾರಿಗೆ ಬೇಕಾದರೂ ಅನ್ವಯಿಸಿ ಅಸ್ತಿತ್ವ ನಿರಸನ ಮಾಡಬಹುದು. ಬುದ್ಧ ನಿಜವಾಗಿ ಇದ್ದನೆಂಬುದಕ್ಕೆ ಹಲವಾರು ಐತಿಹಾಸಿಕ ಆಧಾರಗಳುಂಟು.

ಬುದ್ಧನ ಜನ್ಮಸ್ಥಳ ಈಗ ನೇಪಾಳತರಾಯ್ ಎನಿಸಿಕೊಳ್ಳುವ ಪ್ರದೇಶ. ಉತ್ತರ ಪ್ರದೇಶದ ಮೇಲ್ಭಾಗದ ಅಂಚಿನಲ್ಲಿ ದಕ್ಷಿಣ ನೇಪಾಳಕ್ಕೆ ಸೇರಿದಂತಿರುವ ಈ ಸ್ಥಳ ಎರಡು ಸಾವಿರದ ಆರುನೂರು ವರ್ಷಗಳ ಹಿಂದೆ ಕೋಸಲ ರಾಜ್ಯಕ್ಕೆ ಸೇರಿತ್ತು. ಇಲ್ಲಿದ್ದ ಶಾಕ್ಯ ಕ್ಷತ್ರಿಯರಿಗೆ ಕಪಿಲವಸ್ತು ರಾಜಧಾನಿಯಾಗಿತ್ತು. ಇವರ ಜಾನಪದಕ್ಕೆ ಶುದ್ಧೋದನ ರಾಜ, ಇಕ್ಷ್ವಾಕು ವಂಶಕ್ಕೆ ಸೇರಿದ ಈ ರಾಜನದು ಆದಿತ್ಯ ಕುಲ, ಗೌತಮ ಗೋತ್ರ. ಶುದ್ಧೋದನನ ಹೆಂಡತಿ ಮಾಯಾದೇವಿ ದೇವದಹದ ಸುಪ್ರಬುದ್ಧನ ಮಗಳು. ಈಕೆ ಗರ್ಭತಳೆದು ಕಪಿಲವಸ್ತುವಿನಿಂದ ತನ್ನ ತೌರೂರಾದ ದೇವದಹಕ್ಕೆ ಹೊರಟಿದ್ದಾಗ ದಾರಿ ಮಧ್ಯ ಲುಂಬಿಣಿ ಎಂಬ ಉಪವನದಲ್ಲಿ ವಿಶ್ರಮಿಸಿ ಕೊಳ್ಳುತ್ತಿದ್ದಳಂತೆ. ಆಗ ಪ್ರಸವ ವೇದನೆ ಆರಂಭವಾಗಿ ಆಕೆ ಎದ್ದು ಅಶೋಕ ವೃಕ್ಷದ ರೆಂಬೆಯೊಂದನ್ನು ಹಿಡಿದು ನಿಂತಿದ್ದಾಗ ಗಂಡುಮಗುವೊಂದು ಜನಿಸಿತಂತೆ. ಆ ಮಗುವೇ ಮುಂದೆ ಬುದ್ಧನೆಂದು ಪ್ರಸಿದ್ಧನಾದುದು.

ಬುದ್ಧನ ಜನ್ಮ ಒದಗಿದ ಈ ಸ್ಥಳವನ್ನು ಪ್ರಾಕ್ತನಶಾಸ್ತ್ರಜ್ಞರು ಈಗ ನೇಪಾಳತರಾಯದ ರುಮಿನದೆಯ್ ಎಂದು ನಿರ್ದೇಶನ ಮಾಡಿದ್ದಾರೆ. ಇಲ್ಲಿ ಅಶೋಕನ ಸ್ತಂಭಶಾಸನ ದೊರೆತಿದೆ. ಇದರಲ್ಲಿ `ಹಿದ ಬುಧೇ ಜಾತೇ ಶಕ್ಯ ಮುನೀತಿ' (ಇಲ್ಲಿ ಶಾಕ್ಯಮುನಿ ಬುದ್ಧ ಹುಟ್ಟಿದ) ಎಂಬ ಮಾತಿದೆ. ಅಂತೂ ಮಗು ಹುಟ್ಟದೊಡನೆ ಮಾಯಾದೇವಿ ತೀರಿಕೊಂಡಳು. ಮುಂದೆ ಮಗುವನ್ನು ಮಲತಾಯಿ ಮಹಾಪ್ರಜಾ ಪತಿ ಗೌತಮಿ ಸಾಕಿ ಬೆಳೆಸಿದಳು. ಈಕೆಯೂ ಮುಂದೆ ಬುದ್ಧನ ಸಂಘ ಸೇರಿದಳು. ಹುಟ್ಟಿದ ಮಗುವನ್ನು ಲಕ್ಷಣಜ್ಞರು ಪರಿಶೀಲಿಸಿದಾಗ ಮೂವತ್ತೆರಡು ಮಹಾ ವ್ಯಂಜನಗಳೂ ನೂರಾರು ಉಪವ್ಯಂಜನಗಳೂ ಇದ್ದವಂತೆ. ಅಸಿತ ಎಂಬ ಋಷಿ ಈ ಮಗುವನ್ನು ನೋಡಿ ಈತ ಮುಂದೆ ಚಕ್ರವರ್ತಿಯಾಗುತ್ತಾನೆ ಇಲ್ಲವೆ ಪರಿವ್ರಾಜಕನಾಗುತ್ತಾನೆ ಎಂದು ಭವಿಷ್ಯ ನುಡಿದನಂತೆ. ಸುತ್ತನಿಪಾತದಲ್ಲಿ "ವತ್ಥುಗಾಥಾ" ಎಂಬ ಪರಿಚ್ಛೇದ ಆತ ಈ ದಿವ್ಯ ಮಗುವನ್ನು ಸಂದರ್ಶಿಸಿದ ಸಂದರ್ಭವನ್ನು ರಸವತ್ತಾಗಿ ಬಣ್ಣಿಸುತ್ತದೆ. ಮಗುವಿಗೆ ಸಿದ್ಧಾರ್ಥ ಎಂದು ಹೆಸರಿಟ್ಟರು. ಗೌತಮ ವಂಶದ ಹೆಸರು; ಶಾಕ್ಯಪುತ್ರ ಎಂಬುದು ಕುಲನಾಮ.

ಎಳೆಯ ವಯಸ್ಸಿನಲ್ಲೇ ಬುದ್ಧನ ಅಲೌಕಿಕ ಪ್ರಸಕ್ತಿ ವ್ಯಕ್ತವಾಗಿತ್ತು. ಹುಡುಗನಾಗಿದ್ದ ಗೌತಮ ಒಮ್ಮೆ ಉತ್ಸವ ಸಂದರ್ಭದಲ್ಲಿ ಜಂಬೂವೃಕ್ಷದ ಅಡಿಯಲ್ಲಿ ಕುಳಿಸಿದ್ದವ ಹಾಗೆಯೇ ಸಮಾಧಿವಶನಾದ. ಇದನ್ನು ಕಂಡು ಕಾತರನಾದ ತಂದೆ ಮಗನಿಗೆ ಮದುವೆ ಮಾಡಿದರೆ ಸರಿ ಹೋದೀತೆಂದು ಬಗೆದು ಯಶೋಧರೆಯೆಂಬ ಸುಂದರಿಯನ್ನು ತಂದು ಮದುವೆ ಮಾಡಿದ. ಆಕೆಗೆ ಭದ್ದಾ ಕಚ್ಚಾನಾ, ಗೋಪಾ, ಬಿಂಬಾ, ಸುಭದ್ದಿಕಾ, ಯಶೋದಾ ಎಂದು ಮುಂತಾದ ಹೆಸರುಗಳಿದ್ದಿತೆಂದು ತಿಳಿದುಬರುತ್ತದೆ. ಆದರೆ ತ್ರಿಪಿಟಕ ಗ್ರಂಥಗಳಲ್ಲಿ ಬುದ್ಧನಿಗೆ ಮದುವೆಯಾಗಿದ್ದ ಉಲ್ಲೇಖವಿಲ್ಲ. ಬುದ್ಧನ ಬಾಳ ಕಥೆಗೆ ಮುಖ್ಯ ಆಕರಗಳಾದ ಜಾತಕ, ಮಹಾವಗ್ಗ ಇವು ಈಚಿನ ಕೃತಿಗಳು. ಅಶ್ವಘೋಷನ ಬುದ್ಧಚರಿತ ಮತ್ತು ಮಹಾಯಾನದವರ ಲಲಿತವಿಸ್ತರ ಎರಡೂ ಕಾವ್ಯಗಳಾದುದರಿಂದ ಇವುಗಳಲ್ಲಿ ಐತಿಹಾಸಿಕ ಸತ್ಯವನ್ನು ಅರಸಲು ಸಾಧ್ಯವಿಲ್ಲ.

ಸಿದ್ಧಾರ್ಥನಿಗೆ ಮದುವೆಯಾದಾಗ ಹದಿನಾರು ವರ್ಷಗಳೆಂದೂ ಮದುವೆಯಾದ ಹನ್ನೆರಡು ವರ್ಷಾನಂತರ ರಾಹುಲನೆಂಬ ಗಂಡುಮಗು ಹುಟ್ಟಿತೆಂದೂ ಕಥೆ ಹೇಳುತ್ತದೆ. ಈ ಕಾಲದಲ್ಲಿ ಕ್ರಮೇಣ ಸಿದ್ಧಾರ್ಥನಿಗೆ ವಿರಕ್ತಿ ಬೆಳೆಯುತ್ತಿದ್ದಿತು; ಜಗತ್ತಿನ ದುಃಖ ಹೃದಯವನ್ನು ಹಿಂಡುತ್ತಿದ್ದಿತು. ರಾಹುಲ ಹುಟ್ಟಿದ ಸುದ್ದಿ ಬಂದಾಗ ಸಿದ್ಧಾರ್ಥ ಅಯ್ಯೋ, ಇದೊಂದು ಬಂಧನ (ರಾಹುಲಂ) ಎಂದು ಬಿಸುಸುಯ್ದನಂತೆ. ಒಮ್ಮೆ ಈತ ರಥಾರೂಢನಾಗಿ ನಗರ ಪ್ರದಕ್ಷಿಣೆ ಹೋದಾಗ ಒಬ್ಬ ರೋಗಿ, ಒಬ್ಬ ವೃದ್ಧ, ಒಂದು ಹೆಣ ಇವನ್ನು ನೋಡಿ ಜೀವನದಲ್ಲಿ ತುಂಬಾ ಜುಗುಪ್ಸೆಪಟ್ಟ. ಇವನ್ನು ಬೌದ್ಧ ಪ್ರಕ್ರಿಯೆಯಲ್ಲಿ ತ್ರಿಲಕ್ಷಣಗಳೆಂದು ವ್ಯವಹರಿಸುತ್ತಾರೆ. ಅಂದೇ ರಾತ್ರಿ ಎಲ್ಲರೂ ಮಲಗಿದ್ದಾಗ ಸಿದ್ಧಾರ್ಥ ತನ್ನ ನೆಚ್ಚಿನ ಬಂಟ ಚೆನ್ನನೊಂದಿಗೆ ತನ್ನ ಕುದುರೆಯಾದ ಕಂಧಕವನ್ನೇರಿ ಮನೆ ಬಿಟ್ಟು ಹೊರಟುಹೋದ. ಇದು ಕಥೆ. ಆದರೆ ಮಜ್ಝಿಮ ನಿಕಾಯದಲ್ಲಿ ಬುದ್ಧ ಒಮ್ಮೆ ತಂದೆತಾಯಿಗಳು ಆಳುತ್ತಿದ್ದಾಗ, ತಾನು ಕೇಶ-ಶ್ಮಶ್ರುಗಳನ್ನು ತೆಗೆಸಿ ಕಾಷಾಯ ವಸ್ತ್ರಗಳನ್ನು ಧರಿಸಿ ಮನೆ ಬಿಟ್ಟು ಹೊರಟು ಮನೆಯಿಲ್ಲದವನಾದೆ. (ಮಾತಾಪಿತುಣ್ಣಂ ಅಸ್ಸುಮುಖಾನಂ ರುದನ್ತಾನಂ ಕೇ ನಮಸ್ಸುಂ ಓಹಾರೆತ್ವಾ ಕಾಸಾಯಾನಿ ವತ್ಥಾನಿ ಅಚ್ಛಾದೇತ್ವಾ ಅಗಾರಸ್ಮಾ ಅನಗಾಯಿಂ ಪಬ್ಬಜಿ) ಎಂದು ಹೇಳುವ ಸಂದರ್ಭವಿದೆ. ಪ್ರಚಲಿತ ಕಥೆಯಲ್ಲಿ ಎಷ್ಟು ಕಲ್ಪನೆಗಳು ಸೇರಿವೆಯೆಂದು ಈ ಪ್ರಸ್ತಾಪದಿಂದ ಸ್ಪಷ್ಟವಾಗುತ್ತದೆ.

ಸಿದ್ಧಾರ್ಥ ಮನೆಬಿಟ್ಟು ಕಪಿಲ ವಸ್ತುವಿನ ಗಡಿಯನ್ನು ರಾತ್ರಿಯೇ ದಾಟಿ ಅನೋಮಾ ನದಿಯನ್ನು ದಾಟಿ ಹನ್ನೆರಡು ಯೋಜನ ದೂರದಲ್ಲಿ ವಿವಿಕ್ತವಾದ ಮಾವಿನ ತೋಪೊಂದರಲ್ಲಿ ಏಳು ದಿನ ಕಳೆದ. ಅನಂತರ ಗಂಗಾ ನದಿ ದಾಟಿ ಗಿರಿವ್ರಾಜಕ್ಕೆ ಬಂದ. ಅಲ್ಲಿ ಮಗಧದ ರಾಜ ಈ ತರುಣ ಪರಿವ್ರಾಜಕನನ್ನು ಕಂಡು ಮರಳಿ ಲೌಕಿಕ ಪ್ರಪಂಚಕ್ಕೆ ಆಹ್ವಾನಿಸಲು ಶಾಕ್ಯಪುತ್ರ ನೇಕ್ಖಮ್ಮ್ಮಂ ದಟ್ಟು. ಖೇಮತೋಪಧಾನಾಯ ಗಮಿಸ್ಸಾಮಿ ಎಂದು ಹೇಳಿ ನಿರಾಕರಿಸಿದನಂತೆ. ಅವನಿಗೆ ಬೇಕಾಗಿದ್ದುದು ಪರಮಾಭಿಸಂಬೋಧಿ. ಆಗ ಬಿಂಬಸಾರ ನೀನು ಬುದ್ಧನಾಗುವಿ (ಬುದ್ಧೋ ಭವಿಸ್ಸಸಿ) ಎಂದು ನುಡಿದನಂತೆ. ಅಲ್ಲಿಂದ ಹೊರಟು ರಾಜ ಗೃಹದ ಬಳಿ ಗೃಧ್ರಕೂಟದಲ್ಲಿ ತಪಶ್ಚಯೇ ಮಾಡುತ್ತ ನಿಂತ. ಅಲ್ಲಿಯ ಜನ ಇವನನ್ನು ಮಹಾಶ್ರಮಣ ನೆಂದರು. ಮನಸ್ಸಿಗೆ ಸಮಾಧಾನವಾಗದೆ ಆರಾಢಕಾಲಾಮ, ರುದ್ರಕ ರಾಮಪುತ್ರ ಎಂಬಿಬ್ಬ ಪ್ರಖ್ಯಾತ ತಾಪಸಿಗಳ ಬಳಿ ಕೆಲಕಾಲ ಶಿಷ್ಯವೃತ್ತಿ ಮಾಡಿದ. ಅವರ ಸಮಾಪತ್ತಿಗಳನ್ನೆಲ್ಲ ಮಾಡಿದರೂ ಬೋಧಿ ದೊರೆಯಲಿಲ್ಲವಾಗಿ ಇದು ದಾರಿಯಲ್ಲೆಂದು ಬಗೆದು ಅವರನ್ನು ಬಿಟ್ಟು ಉರುವಿಲ್ವದ ಕಾಡಿನಲ್ಲಿ ಕಠೋರ ತಪಶ್ಚರ್ಯೆ ನಡೆಸಿದ. ಇಲ್ಲಿ ನೇರಂಜರಾ ನದಿಯ ದಂಡೆಯ ಮೇಲೆ ಐದು ಬ್ರಾಹ್ಮಣ ತಪಸ್ವಿಗಳು ಇವನನ್ನು ಸೇರಿದರು. ಕೌಂಡಿಣ್ಯ, ಅಶ್ವಜಿತ್, ವಾಷ್ಪ ಮಹಾನಾಮ, ಭದ್ರಕ-ಈ ಐವರು ಬುದ್ಧನಿಗೆ ತುಂಬ ಉಪಕಾರ ಮಾಡಿದರು. ಶಾಕ್ಯವಂಶದ ಈ ಶ್ರಮಣ ಬುದ್ಧನಾಗುವನೆಂಬ ವಿಶ್ವಾಸ ಅವರಿಗಿದ್ದಿತು. ಆದರೆ ಕಠೋರವಾದ ತಪಶ್ಚರ್ಯೆಯಿಂದ ಆಧ್ಯಾತ್ಮಿಕ ಸಂಪತ್ತು ಲಭಿಸದೆಂದು ಶಾಕ್ಯಪುತ್ರ ಶ್ರಮಣನಿಗೇ ಅನಿಸಿತು. ಗಾಳಿಯಲ್ಲಿ ಗಂಟು ಹಾಕುವಂತೆ (ಆಕಾಸೇ ಗಂಠಿಕರಣ ಕಾಲೋವಿಯ) ಯತ್ನವೆಲ್ಲ ನಿರರ್ಥಕವೆಂದೆನಿಸಿತು. ಇಷ್ಟು ದುಷ್ಕರವಾದದ್ದು ಬೋಧಿಗೆ ದಾರಿಯಾಗದೆಂದು (ಅಯಂ ದುಕ್ಖರಕಾರಿಕಾ ನಾಮ ಬೋಧಾಯ ಮಗ್ಗೋ ನಾ ಹೋರೇತಿ) ನಿಶ್ಚಯಿಸಿ ತಪಶ್ಚರ್ಯೆಯ ಬಿಗಿಯನ್ನು ಸಡಲಿಸಿದ. ಇವನೊಂದಿಗಿದ್ದ ಐವರು ಭಿಕ್ಷುಗಳಿಗೆ (ಪಂಚವಗ್ಗೀಯಾ ಭಿಕ್ಖೂ) ಇದು ಸರಿದೋರಲಿಲ್ಲ. ಶ್ರಮಣಗೋತಮ ಪ್ರಧಾನ ವಿಭ್ರಾಂತನಾಗಿ ಭೋಗಕ್ಕಿಳಿದನೆಂದು ಅವರು ಬಗೆದು ಅವನನ್ನು ಬಿಟ್ಟು ವಾರಾಣಸಿಗೆ ತೆರಳಿದರು.

ಗೋತಮ ತಪಶ್ಚರ್ಯೆ ಬಿಡಲಿಲ್ಲ. ಶ್ಮಶಾನಕ್ಕೆ ಹೋಗಿ ಅಲ್ಲಿ ಹೆಣದ ಅವಶೇಷಗಳ ಪಕ್ಕದಲ್ಲಿ ಕುಳಿತ. ಜನ ಈತನನ್ನು ಪಿಶಾಚಿಯೆಂದು ಬಗೆದು ಕಲ್ಲು ಎಸೆದರು. ಮುಂದೆ ಈತ ಸೇನಾನಿಯ ಗ್ರಾಮಕ್ಕೆ ಹೋಗಿ ಅಲ್ಲಿ ನ್ಯಗ್ರೋಧ ಮರದಡಿಯಲ್ಲಿ ಕುಳಿತು ಧ್ಯಾನಾರೂಢನಾದ. ಆ ಊರಿನ ಹೆಗ್ಗಡೆ ಸೇನನೆಂಬವನ ಮಗಳು ಸುಜಾತಾ (ನಂದಬಾಲಾ ಅವಳ ಇನ್ನೊಂದು ಹೆಸರು) ಈ ಶ್ರಮಣನಿಗೆ ಪಾಯಸ ಒಪ್ಪಿಸಿದಳಂತೆ. ಆ ದಿನ ಶ್ರಮಣಗೋತಮ ಏಕಾಂಗಿಯಾಗಿ ಸಾಲುಮರಗಳ ತೋಪಿನಲ್ಲಿ ಕಾಲ ಕಳೆದ. ಸಂಜೆ ಮೂಡಿದಾಗ ಅರಳೀಮರದ ಬಳಿ ಹೋಗಿ ಅದರ ನೆರಳಿನಲ್ಲಿ ಪೂರ್ವಕ್ಕೆ ಮುಖ ಮಾಡಿ ಕುಳಿತ. ಅದೇ ಈಗ ಬೋಧಿವೃಕ್ಷವೆಂದು ಪ್ರಖ್ಯಾತವಾಗಿರುವ ಮರ. ಕೂಡುವಾಗ ಶ್ರಮಣ ನನ್ನ ಮೈಮೂಳೆಗಳು ಮುರಿಯಲಿ, ನನ್ನ ರಕ್ತ ಒಣಗಿ ಹೋಗಲಿ ಆದರೂ ನನ್ನ ಮನೋರಥದ ಪೂರೈಕೆಯಾಗದೆ ಇಲ್ಲಿಂದ ಎಳೆನು ಎಂದು ದೃಢ ಸಂಕಲ್ಪ ಮಾಡಿದ.

ಬೌದ್ಧರ ಗ್ರಂಥಗಳಲ್ಲಿ ಗೋತಮನಿಗೆ ಪದೇ ಪದೇ ಒದಗುತ್ತಿದ್ದ ಲೌಕಿಕ ಪ್ರವೃತ್ತಿಗಳನ್ನು, ಆಕರ್ಷಣೆಗಳನ್ನು ಮನೋದೌರ್ಬಲ್ಯಗಳನ್ನು ಮಾರನೆಂದು ವ್ಯವಹರಿಸಿದ್ದಾರೆ. ಮಾರ ಮೂರು ಬಾರಿ ಬಂದು ಶ್ರಮಣನನ್ನು ದಾರಿತಪ್ಪಿಸಿ ಮತ್ತೆ ಪ್ರಾಪಂಚಿಕ ಭೋಗಕ್ಕೆಳೆಯಲು ಪ್ರಯತ್ನಿಸಿದನೆಂದು ನಿರೂಪಣೆಯಿದೆ. ಬೋಧಿವೃಕ್ಷದ ಅಡಿಯಲ್ಲಿ ಕಡೆಯ ಬಾರಿಗೆ ಪ್ರಯತ್ನ ಮಾಡಿ ವಿಫಲನಾಗಿ ಓಡಿ ಹೋದನಂತೆ. ಅವನ ಸೇನೆಯೂ ಚೆಲ್ಲಾಪಿಲ್ಲಿಯಾಗಿ ಚದರಿತಂತೆ; ಅವನ ಧ್ವಜ ಮುರಿದು ಬಿದ್ದತಂತೆ. ಇದನ್ನು ಅಜಂತಾ ಗುಹೆಗಳ ಭಿತ್ತಿಚಿತ್ರಗಳಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಮಾರ ಓಡಿಹೋಗುವಾಗ ಏಳು ವರ್ಷ ಎಡೆಬಿಡದೆ ಈ ಶ್ರಮಣನನ್ನು ಹಿಂಬಾಲಿಸಿದೆ; ದುರ್ಬಲವಾದ ಚಿತ್ತವೃತ್ತಿ ಒದಗೀತೆಂದೂ ನಾನು ಒಳಗೆ ಇಳಿಯಬಹುದೆಂದೂ ನಿರೀಕ್ಷಿಸಿದೆ. ಆದರೆ ಅದಕ್ಕೆ ಅವಕಾಶವೇ ಆಗಲಿಲ್ಲ. ಎಂದೂ ಅವನು ಜಾಗೃತನಾಗಿದ್ದ (ಸತ್ತವಸ್ಸಾನಿ ಭಗವಂತಂ ಅನುಬಂಧಿ ಪದಾಪದಂ, ಓತಾರಂ ನಾಧಿಗಚ್ಛಿಸ್ಸಂ ಸಂಬುದ್ಧಸ್ಯ ಸತೀ ಮತೋ) ಎಂದು ಹೇಳಿದನಂತೆ. ಇಷ್ಟು ಸ್ಮøತಿವಂತನಾಗಿ ಸ್ಥಿತಪ್ರಜ್ಞನಾಗಿ ಮಾಡಿದ ಈತನ ಧ್ಯಾನ ಕಡೆಗೂ ಫಲಿಸಿತು. ಮುಂಜಾನೆ ಹರಿಯುವಲ್ಲಿ ಸಂಬೋಧಿ ಪ್ರಾಪ್ತವಾಗಿ ಶ್ರಮಣ ಗೋತಮ ಬುದ್ಧನೆನಿಸಿದ. ಮಾರನನ್ನೂ ಅವನ ಪ್ರಲೋಧನೆಗಳನ್ನೂ ಗೆದ್ದು ಜಿನನಾಗಿದ್ದ. ಆಗ ಈತನಿಗೆ ಮೂವತ್ತೈದು ವರ್ಷ ಪ್ರಾಯ.

ಸಂಬೋಧಿ ಲಕ್ಷಣವನ್ನು ಸ್ಪಷ್ಟವಾಗಿ ಹೇಳಲಾಗದಿದ್ದರೂ ಅದನ್ನು ವಿಮುಕ್ತಿ ಸುಖವೆಂದು ಮಾತ್ರ ನಿರೂಪಿಸಿದ್ದಾರೆ. ಅದು 'ಬ್ರಹ್ಮಚರಿಯ ಪರಯೋಸಾನ ಉಪಶಮ.' ಅಭಿಜ್ಞೆ, ಸಂಬೋಧಿ, ನಿರ್ವಾಣ, ಚೇತೋವಿಮುಕ್ತಿ. ಪುನರ್ಭವ ಉಂಟು ಮಾಡುವ ತೃಷ್ಣೆಯ ಮರವನ್ನು ಆಮೂಲಾಗ್ರವಾಗಿ ಕಡಿದುರುಳಿಸಿ ಸಂಸಾರದ ಸ್ರೋತ ತಡೆಗಟ್ಟಿ ಇಂಗಿಸಿ, ದುಃಖದ ಅಂತ್ಯ ಗೋತಮ ಕಂಡ. ಈ ವಿಮುಕ್ತಿ ಸುಖ ಅನುಭವಿಸುತ್ತ ಬುದ್ಧ ಬೋಧಿವೃಕ್ಷದ ಅಡಿಯಲ್ಲೇ ಏಳು ದಿನ ತಾನು ಕಂಡ ಸಂಬೋಧಿಯ ಅರ್ಥವನ್ನು ವಿಚಾರ ಮಾಡುತ್ತ ಕಳೆದ. ಮೂರನೆಯ ವಾರವನ್ನು ಬೋಧಿವೃಕ್ಷ ಮತ್ತು ನ್ಯಗ್ರೋಧ ವೃಕ್ಷಗಳ ನಡುವೆ ಓಡಾಡುತ್ತ ಕಳೆದ. ನಾಲ್ಕನೆಯ ವಾರ ಅಭಿಧಮ್ಮನ ಆಳವಾದ ಚಿಂತನೆಗಳಲ್ಲಿ ಕಳೆಯಿತು. ಹೀಗೆ ನಲವತ್ತೊಂಬತ್ತು ದಿನಗಳ ಕಾಲ ಬುದ್ಧ ನಿದ್ರಾಹಾರ ಬಿಟ್ಟು ಸ್ಥಿತಪ್ರಜ್ಞನಾಗಿ ಜಾಗೃತನಾಗಿ ದರ್ಶನ ಸಮೀಕ್ಷೆ ಮಾಡಿದ.

ತಾನು ಕಂಡ ಸಂಬೋಧಿಯನ್ನು ಲೋಕಕ್ಕೆ ತಿಳಿಸುವುದೇ ಬಿಡುವುದೇ ಎಂದು ಬುದ್ಧನಿಗೆ ಸಂದೇಹವಾಯಿತು. ತಾನು ಇದನ್ನು ಕಾಣಲು ಪಟ್ಟ ಕಷ್ಟ ಜನರು ಪಡುವುದಿಲ್ಲ, ಸುಖಾರಾಮರಾದವರು ಸಾಮಾನ್ಯ ಜನ. ತನ್ನ ಸಂಬೋಧಿ ಅವರಿಗೆ ಅರ್ಥವಾಗದು ಎಂದು ಶಂಕಿಸಿದ. ಆಗ ಬ್ರಹ್ಮಾಸಹಂಪತಿ ಬಂದು ಭಗವಂತನಾದ ಬುದ್ಧನ ಧರ್ಮವನ್ನು ಜಗತ್ತಿಗೆ ಹೇಳಬೇಕು (ದೇಸೇತು ಭಗವಾ ಧಮ್ಮಂ); ಎಲ್ಲರ ಕಣ್ಣೂ ಕುರುಡಾಗಿಲ್ಲ; ಕಣ್ಣಿಗೆ ಮಣ್ಣು ಮುಸುಕಿ ಕಾಣದವರರಿದ್ದಾರೆ; ಅಂಥವರಿಗೆ ನಿನ್ನ ದೇಶನದಿಂದ ಪ್ರಯೋಜನವಾದೀತು ಎಂದು ಆಗ್ರಹಪಡಿಸಿದ. ಆಗಲೆಂದು ಒಪ್ಪಿದ ಬುದ್ಧನಿಗೆ ಯಾರಿಗೆ ಮೊದಲು ಹೇಳಬೇಕು ಎಂಬುದು ತಿಳಿಯದಾಯಿತು. ತನಗೆ ಆಚಾರ್ಯರಾಗಿದ್ದ ಆರಾಢಕಾಲಾಮ ಮತ್ತು ರುದ್ರಕ ರಾಮಪುತ್ರ ಇವರಿಗೆ ಹೇಳಿದರೆ ಒಳಿತೆಂದು ಯೋಚಿಸುತ್ತಿರುವಲ್ಲಿ ಅವರು ಆಗಲೇ ತೀರಿಕೊಂಡಿದ್ದಾರೆಂದು ತಿಳಿದು ಬಂದಿತು. ಅನಂತರ ತನಗೆ ಉರುವಿಲ್ವದಲ್ಲಿ ತುಂಬ ನೆರವಾಗಿದ್ದ (ಬಹೂಪಕರಾ) ಐವರು ತಪಸ್ವಿಗಳಿಗೆ ತನ್ನ ಬೋಧಿಯ ವಿಚಾರ ತಿಳಿಸುತ್ತೇನೆಂದು ಮನಸ್ಸು ಮಾಡಿದ. ಅವರು ಆ ಕಾಲದಲ್ಲಿ ವಾರಾಣಸಿಯ ಉಪವನವಾದ ಮೃಗದಾವ (ಮಿಗದಾಯ) ಎಂಬಲ್ಲಿ ಇರುತ್ತಿದ್ದರೆಂದು ತಿಳಿದು ಗಯೆಯಿಂದ ಬುದ್ಧ ಅಲ್ಲಿಗೆ ತೆರಳಿದ್ದ.

ವಾರಾಣಸಿಯ ಋಷಿಪತ್ತನ (ಇಸಿಪತನ) ಎಂಬಲ್ಲಿ ಆ ಐವರು ಭಿಕ್ಷುಗಳನ್ನು ಕಂಡು ಅವರಿಗೆ ತನ್ನ ಸಂಬೋಧಿಯ ಅನುಭವ ನಿರೂಪಿಸಿದ. ತನಗೆ ಅಮೃತ ಅಧಿಗತವಾದುದನ್ನು ತಿಳಿಸಿದ. ಮೊದಲು ಸಂದೇಹಪಟ್ಟರೂ ಆ ಐವರು ಈತನ ಪ್ರವಚನವನ್ನು ಕುತೂಹಲದಿಂದ ಆಲಿಸಿದರು. ಮೊತ್ತ ಮೊದಲ ಪ್ರವಚನ ಧರ್ಮಚಕ್ರ ಪ್ರವರ್ತನ ಸೂತ್ರ (ಧಮ್ಮಚಕ್ಕಪ್ಪವತ್ತನಸುತ್ತ) ಎಂದು ಪ್ರಸಿದ್ಧವಾಯಿತು. ಬುದ್ಧನ ಧರ್ಮದ ಗಾಲಿ ಉರುಳಲಾರಂಭಿಸಿದುದು ಇಲ್ಲಿಂದ; ಧರ್ಮಸಾಮ್ರಾಜ್ಯ ಪ್ರತಿಷ್ಠಿತವಾದದ್ದು. ಈ ಸಂದರ್ಭದಲ್ಲಿ. ಈ ಸನ್ನಿವೇಶವನ್ನು ಬೌದ್ಧಶಿಲ್ಪದಲ್ಲಿ ದ್ವಾದಶಾಕಾರದ ಚಕ್ರ, ಎರಡೂ ಕಡೆ ಜಿಂಕೆಗಳು ಹೀಗೆ ಚಿತ್ರಿಸಿದ್ದಾರೆ, ಈ ಸೂತ್ರದಿಂದಲೇ ಬುದ್ಧನ ಉಪದೇಶ ಮಾಲೆ ಆರಂಭವಾಯಿತು. ಆ ಐವರು ಭಿಕ್ಷುಗಳು ಈತನ ಉಪದೇಶ ಸರಿಯೆಂದು ಒಪ್ಪಿಕೊಂಡು ಶಿಷ್ಯರಾದರು. ಸಂಬೋಧಿಯ ಆರ್ಥವನ್ನು ಅವರಲ್ಲಿ ಒಬ್ಬನಾದ ಕೌಂಡಿಣ್ಯ ಒಡನೆಯೇ ಗ್ರಹಿಸಿದನಾಗಿ ಅವನಿಗೆ ಆಜ್ಞಾತ ಕೌಂಡಿಣ್ಯ ಎಂಬ ಉಪನಾಮ ಒದಗಿ ಬಂದಿತು. ಆಗ ಜಗತ್ತಿನಲ್ಲಿ ಬುದ್ಧನೂ ಸೇರಿ ಆರು ಅರ್ಹತರಿದ್ದರು. ಮೊತ್ತಮೊದಲ ಈ ಪ್ರವಚನ ನಡೆದ ಸ್ಥಳ ಈಗ ಸಾರನಾಥ್ ಎನಿಸಿಕೊಳ್ಳುತ್ತದೆ. ಇಲ್ಲಿ ಚಕ್ರವರ್ತಿ ಅಶೋಕ ಈ ಸಂದರ್ಭದ ನೆನಪಿಗೆ ಸ್ತೂಪದ (ಧಾಮೋಕ್ ಸ್ತೂಪ) ಅವಶೇಷಗಳು ಇಂದಿಗೂ ಇವೆ.

ಬುದ್ಧ ಐವರು ಭಿಕ್ಷುಗಳೊಂದಿಗೆ ವಾರಾಣಸಿಯಲ್ಲೇ ಬೀಡು ಬಿಟ್ಟಿದ್ದಾಗ ಯಶನೆಂಬ ಧನಿಕ ಯುವಕ ದುಃಖಾರ್ತನಾಗಿ ಬುದ್ಧನ ಬಳಿ ಬಂದು ಇವನ ಉಪದೇಶ ಆಲಿಸಿ ಸಂಘ ಸೇರಿದ. ಯಶನನ್ನು ಅರಸುತ್ತ ಬಂದ ಅವನ ತಂದೆ ಉಪಾಸಕನಾಗಿ ನಿಂತ. ಯಶನ ನಾಲ್ವರು ಮಂದಿ ಮಿತ್ರರು ಪೂರ್ಣ, ವಿಮಲ, ಗವಾಂಪತಿ ಮತ್ತು ಸುಬಾಹು ಎಂಬವರು ಭಿಕ್ಷುಗಳಾಗಿ ಸಂಘ ಸೇರಿದರು. ಹೀಗೆ ವಾರಾಣಸಿಯ ಐವತ್ತು ಮಂದಿ ಶ್ರೀಮಂತ ತರುಣರು ಬುದ್ಧನ ಅನುಯಾಯಿಗಳಾದರು. ಈ ತೆರನಾಗಿ ಬುದ್ಧನ ನಲವತ್ತೈದು ವರ್ಷಗಳ ಪರಿವ್ರಾಜಕ ಜೀವನ ಆರಂಭವಾಯಿತು. ದುಃಖ ದೌರ್ಮನಸ್ಯಗಳ ಅಸ್ತಂಗಮಕ್ಕಾಗಿ ಶುದ್ಧವಾದ, ಪರಿಪೂರ್ಣವಾದ ಬ್ರಹ್ಮಚರ್ಯ ನಡೆಸುವುದೇ ಬುದ್ಧನ ಕರೆಯಾಗಿತ್ತು. ಈತನ ಪ್ರತಿಭೆ ಆ ಕಾಲಕ್ಕೆ ದೊಡ್ಡ ಜಟಿಲ ತಪಸ್ವಿಗಳೆಂದು ಪ್ರಸಿದ್ಧರಾಗಿದ್ದ ಉರುವೇಲ ಕಾಶ್ಯಪ, ಗಯಾಕಾಶ್ಯಪ, ನದೀಕಾಶ್ಯಪ ಎಂಬ ಮೂವರು ಸಹೋದರರ ಆಸಕ್ತಿ ಸೆಳೆಯಿತು. ಅವರು ಶಿಷ್ಯರಾದೊಡನೆ ಅವರ ಅಪಾರ ಭಕ್ತಸಮುದಾಯೆಲ್ಲ ಬುದ್ಧನ ಶಿಷ್ಯತ್ವ ಪಡೆಯಿತು. ಮಗಧದ ಅರಸನಾದ ಬಿಂಬಸಾರನ ಆಹ್ವಾನ ಮನ್ನಿಸಿ ಬುದ್ಧ ತನ್ನ ಸಂಘದೊಂದಿಗೆ ರಾಜಗೃಹಕ್ಕೆ ತೆರಳಿ ಅಲ್ಲಿ ರಾಜನಿಗೆ ಬ್ರಹ್ಮಚರ್ಯದ ಉಪದೇಶ ನೀಡಿದ. ಯಾವ ಪಾಪವನ್ನೂ ಮಾಡದಿರುವುದು, ಕುಶಲವಾದುದನ್ನು ಆಚರಿಸುವುದು, ಮನಸ್ಸನ್ನು ತೊಳೆದಿಡುವುದು, (ಸಬ್ಬಪಾಪಸ್ಸ ಅಕರಣಂ, ಸುಸಲಸ್ಸ ಉಪಸಂಪದಾ, ಸಚಿತ್ತ ಪರಯೋದಪನಂ, ಏತಂ, ಬುದ್ಧಾನ ಸಾಸನಂ) - ಇದು ಬುದ್ಧನ ಉಪದೇಶದ ಸಾರ. ರಾಜಗೃಹದಲ್ಲಿ ಬುದ್ಧ ತಂಗಿದ್ದಾಗ ಶಾರಿಪುತ್ರ, ಮೌದ್ಗಲ್ಯಾಯನ ಎಂಬಿಬ್ಬ ಪ್ರತಿಭಾವಂತ ಬ್ರಾಹ್ಮಣರು ಭಿಕ್ಷುಗಳಾಗಿ ಸೇರಿದರು. ಇವರಿಂದ ಬುದ್ಧನ ಧರ್ಮ ವಿಶೇಷವಾಗಿ ದೃಢವಾಯಿತು; ಇವರನ್ನು ಬುದ್ಧನೇ ಧರ್ಮಸೇನಾಪತಿಗಳು ಎಂದು ಗೌರವಿಸಿದ. ಸುದತ್ತ (ಅನಾಥಪಿಂಡಿಕ) ಎಂಬ ಶ್ರೇಷ್ಠಿ ಬುದ್ಧನ ವ್ಯಕ್ತಿತ್ವಕ್ಕೆ ಮಾರುಹೋಗಿ ಉಪಾಸಕನಾದ. ಬುದ್ಧನ ಬಾಳಿನಲ್ಲಿ ಮತ್ತೆ ಮತ್ತೆ ದಾನಿಯಾಗಿ ಧರ್ಮದ ಪ್ರಸಾರಕ್ಕೆ ಆಸರೆಯಾಗಿ ಬರುವ ವ್ಯಕ್ತಿಯೀತ. ಈತ ಬುದ್ಧನನ್ನು ಶ್ರಾವಸ್ತಿ ನಾವತ್ಥಿಗೆ ಆಹ್ವಾನಿಸಿ ಅಲ್ಲಿ ಜೇತುಕುಮಾರನಿಂದ ಕೊಂಡ ಭವ್ಯ ಆರಾಮವನ್ನು ಬುದ್ಧನ ಸಂಘಕ್ಕೆ ದಾನ ಮಾಡಿದ. ಜೇತಕುಮಾರ ರಾಜಪ್ರಸೇನಜಿತನ ಮಗ, ಅವನೂ ಬುದ್ಧನನ್ನು ಸನ್ಮಾನಿಸುತ್ತಿದ್ದವ. ಈ ಜೇತವನಾರಾಮದಲ್ಲೇ (ಅಥವಾ ಅನಾಥಪಿಂಡಿಕಸ್ಸ ಆರಾಮ) ಪಾಳಿ ತ್ರಿಪಿಟಕದಲ್ಲಿಯ ನೂರಾರು ಸೂತ್ರಗಳು ರೂಪ ತಳೆದುವು. ಶ್ರಾವಸ್ತಿಯಲ್ಲೇ ವಿಶಾಖೆ ಎಂಬಾಕೆ ಪೂರ್ವಾರಾಮ (ಪುಬ್ಬಾರಾಮ) ಎಂಬ ಮತ್ತೊಂದು ಆರಾಮನನ್ನು ದಾನ ಮಾಡಿದಳು. ಕೋಸಲದ ಅರಸ ಪ್ರಸೇನಜಿತನ ಮಂತ್ರಿ ಮೃಗಧರನ ಸೊಸೆಯಾದ ಈಕೆಯನ್ನು ತಾಯಿ ಎಂದು ಕರೆಯುತ್ತಿದ್ದನಂತೆ. ಹೀಗಾಗಿ ಈಕೆಗೆ ಮಿಗಾರಮಾತಾ ಎಂಬ ಹೆಸರು ಇದ್ದಿತು.
ಅನಂತರ ಬುದ್ಧ ತನ್ನ ಊರಾದ ಕಪಿಲ ವಸ್ತುವಿಗೆ ಬಂದು ಶುದ್ಧೋದನನನ್ನು ಸಂದರ್ಶಿಸಿದ. ತಂದೆಯನ್ನು ಅಗಲಿ ಏಳು ವರ್ಷಗಳಾಗಿದ್ದುವು; ಈಗ ಶುದ್ಧೋದನನೂ ಬುದ್ಧನ ಉಪದೇಶ ಕೇಳಿ ಉಪಾಸಕನಾದ. ಅಷ್ಟೇ ಅಲ್ಲ ಮಗನ ಸಂಘಕ್ಕೆಂದು ಸೊಗಸಾದ ನ್ಯಗ್ರೋಧಮರಗಳ ಆರಾಮ ದಾನ ಮಾಡಿದ ಕೂಡ. ಕಪಿಲವಸ್ತುವಿಗೆ ಬುದ್ಧ ಬಂದಾಗಲೇ ಈತನ ಹಲವಾರು ತರುಣ ಬಂಧುಗಳು ಸಂಘ ಸೇರಿದರು. ಅನಿರುದ್ಧ, ದೇವದತ್ತ, ಭದ್ರಕ (ಭದ್ದಿಯ), ರೇವತ, ಆನಂದ ಇವರು ಪ್ರಮುಖರು. ಶಾಕ್ಯರಿಗೆ ಕ್ಷೌರಿಕನಾಗಿದ್ದ ಉಪಾಲಿಯೂ ಭಿಕ್ಷುವಾದ. ಬುದ್ಧನ ಪೂರ್ವಾಶ್ರಮದ ಮಗನಾದ ರಾಹುಲನೂ ತಂದೆಯ ಪರಿವ್ರಾಜ್ಯ ಸಂಪತ್ತಿಗೆ ಉತ್ತರಾಧಿಕಾರಿಯಾಗಬೇಕೆಂದು ಬಯಸಿ ಭಿಕ್ಷುವಾದ. ಮುಂದೆ ಶುದ್ಧೋದನ ತೀರಿಕೊಂಡಾಗ ಅವನ ಹೆಂಡತಿಯಾದ ಮಹಾಪ್ರಜಾಪತೀ ಗೋತಮಿ (ಬುದ್ಧನ ಸಾಕುತಾಯಿ) ತನ್ನ ಪರಿವಾರದೊಂದಿಗೆ ಬುದ್ಧನ ಸಂಘ ಸೇರಿದಳು. ಹೀಗಾಗಿ ಭಿಕ್ಷುಸಂಘವಲ್ಲದೆ ಭಿಕ್ಷುಣೀ ಸಂಘವೂ ರೂಪಗೊಂಡಿತು.

ಮಗಧದ ರಾಜ ಬಿಂಬಸಾರ, ಅವನ ರಾಣಿ ಕ್ಷೇಮ, ಮಗ ಅಜಾತಶತ್ರು ಎಲ್ಲರೂ ಉಪಾಸಕರಾಗಿ ನಿಂತರು. ಅಜಾತಶತ್ರು ಮೊದಲು ಸಂಘ ಒಡೆದ ದೇವದತ್ತನಿಗೆ ನೆರವಾಗಿ ಬುದ್ಧನಿಗೆ ವಿರುದ್ಧನಾಗಿದ್ದು, ಅನಂತರ ಬುದ್ಧನ ಮಾಹಾತ್ಮ್ಯ ಅರಿತು ಅವನ ಶಿಷ್ಯನಾದವ. ಕೋಸಲದ ರಾಜ ಪ್ರಸೇನಜಿತ (ಪಸೇನದಿ) ವತ್ಸರಾಜನಾದ ಉದಯನ (ಉದೇನ) ಆವಂತಿಯ ರಾಜ ಪ್ರದ್ಯೋತ (ಪಜ್ಜೋತ) ಶುಂಶೂಮಾರಗಿರಿಯ ಭರ್ಗಪ್ರಾಂತ್ಯದ ಒಡೆಯ ಭರ್ಗ ಇವರುಗಳೂ ಬುದ್ಧನ ಉಪಾಸಕರಾದರು. ಉದಯನ ಕೌಶಾಂಬಿಯಲ್ಲಿ ಫೋಷಿತರಾಮವೆಂಬ ಉದ್ಯಾನವನ್ನು ಸಂಘಕ್ಕೆ ದಾನ ಮಾಡಿದ. ಬಿಂಬಸಾರನ ವೈದ್ಯನಾದ ಜೀವಕನೂ ಬುದ್ಧನ ಉಪಾಸಕನಾದ. ಆ ಕಾಲಕ್ಕೆ ತುಂಬ ಪ್ರಖ್ಯಾತನಾಗಿದ್ದ ವೈದ್ಯನೀತ, ಮಕ್ಕಳ ಕಾಯಿಲೆಗೆ ಇವರು ಎತ್ತಿದ ಕೈ ಆಗಿದ್ದುದರಿಂದ ಈತನನ್ನು ಕೋಮಾರ ಭಚ್ಜ ಅಜೀವಕನೆನ್ನುತ್ತಿದ್ದರು.

ಹೀಗೆ ರಾಜರು, ಶ್ರೀಮಂತರು ಮಾತ್ರವಲ್ಲದೆ ಸಾಮಾನ್ಯ ಜನರೂ ನಿಕೃಷ್ಟವಾದದ್ದೆಂದು ಬಗೆದ ವೃತ್ತಿಗಳಲ್ಲಿದ್ದವರೂ ಸಂಘ ಸೇರಿದರು. ಉಪಾಸಕರಾಗಿ ನಿಂತರು. ಈ ಶಿಷ್ಯರಲ್ಲಿ ಒಬ್ಬನಾದ ಉಪಾಲಿ ಕ್ಷೌರಿಕ. ಆಳವಿಯಲ್ಲಿ ಬುದ್ಧನಿಂದ ಸನ್ಮಾನಿತನಾಗಿ ಸುನೀತ ಜಾಡಮಾಲಿ. ಅಂಗುಳಿಮಾಲ ಕಾಡಿನಲ್ಲಿ ವಾಸಿಸುತ್ತಿದ್ದ ದರೋಡಕಾರನು. ಶಿಷ್ಯೆಯರಲ್ಲಿ ಪ್ರಸಿದ್ಧಳಾದ ಆಮ್ರಪಾಲ್ಲಿ (ಅಂಬಪಾಲಿ) ಮೊದಲಿಗೆ ವೇಶ್ಯೆ. ಸುಪ್ರಬುದ್ಧನೆಂಬ ಇನ್ನೊಬ್ಬ ಉಪಾಸಕ ತೊನ್ನು ಬಂದ ಎಲ್ಲರಿಂದಲೂ ತಿರಸ್ಕøತನಾಗಿದ್ದವ. ವೈದಿಕ ಧರ್ಮದಲ್ಲೇ ಅನುರಕ್ತಿಯಿದ್ದ ಬ್ರಾಹ್ಮಣರೂ ಬುದ್ಧನ ಧರ್ಮಪ್ರಸಾರ ಕಾಯದಲ್ಲಿ ನೆರವಾದರು. ಅಗ್ನಿ ಹೋತ್ರಿಗಳಾದ ಉರುವಿಲ್ವಕಾಶ್ಯಪ, ನದೀ ಕಾಶ್ಯಪ, ಗಯಾಕಾಶ್ಯಪ, ಶಾರಿಪುತ್ರ, ಮೌದ್ಗಲ್ಯಾಯನ (ಮೊಗ್ಗಲ್ಲಾನ) ಕೌಂಡಿನ್ಯ ಮತು ಅವನ ನಾಲ್ವರು ಸಹಚರರು, ಮಹಾಕಾತ್ಯಾಯನ, ಪೋಕ್ಖರಸಾದಿ, ಸೋಣದಂಡ, ಮಾಲುಂಕ್ಯಪುತ್ರ, ಸುಂದರಿಕ ಭಾರದ್ವಾಜ, ಕೃಷಿ ಭಾರದ್ವಾಜ ಮುಂತಾದವರೆಲ್ಲ ಬ್ರಾಹ್ಮಣರು, ಬುದ್ಧನ ಹಿರಿಮೆಯನ್ನು ಪ್ರಕಟ ಮಾಡಿದವರಲ್ಲಿ ಕೌಂಡಿಣ್ಯ, ಶಾರಿಪುತ್ರ, ಮೌದ್ಗಲ್ಯಾಯನ ಇವರುಗಳು ಪ್ರಮುಖರು. ಬುದ್ಧನ ತತ್ತ್ವಕ್ಕೆ ಅಭಿಧರ್ಮದ ಮೆರುಗನ್ನು ಕೊಟ್ಟವ ಶಾರಿಪುತ್ರ ಎಂದು ಹೇಳುತ್ತಾರೆ. ಶಾರಿಪುತ್ರ ಮೌದ್ಗಲ್ಯಾಯನ ಇವರು ಈಗಿನ ಬಿಹಾರ್ ರಾಜ್ಯದ ನಾಲಂದದಲ್ಲಿ ಇರುತ್ತಿದ್ದರು. ಇವರು ಬುದ್ಧ ಬದುಕಿದ್ದಾಗಲೇ ತೀರಿಕೊಂಡರು. ಇವರ ಅವಶೇಷಗಳ ಮೇಲೆ ಕಟ್ಟಿದ ಸ್ತೂಪವೇ ಇಂದು ಪ್ರಸಿದ್ಧವಾಗಿರುವ ಸಾಂಚೀಸ್ತೂಪ. ಇದು ಭೂಪಾಲದ ಬಳಿಯಿರುವ ಗುಡ್ಡದ ಮೇಲೆ ರಮ್ಯ ಶಿಲ್ಪಗಳನ್ನು ಮೂಡಿಸಿ ಮಾಡಿದ ಮಂದಿರ. ಪ್ರಾಚೀನ ವಾಗಿದ್ದ ಸಣ್ಣ ಸ್ತೂಪವನ್ನು ಅಶೋಕ ಹಿಗ್ಗಿಸಿದ. ಬುದ್ಧ ತೀರಿಕೊಂಡ ಅನಂತರ ರಾಜಗೃಹದಲ್ಲಿ ನಡೆದ ಸಂಗೀತಿಯಲ್ಲಿ ಪ್ರಮುಖ ಪಾತ್ರ ವಹಿಸಿ ಬುದ್ಧ ವಚನವನ್ನೆಲ್ಲ ತ್ರಿಪಿಟಕಗಳಲ್ಲಿ ಮೂಡಿಸಿದವನೇ ಮಹಾ ಕಾತ್ಯಾಯನ. ಹೀಗೆ ಬುದ್ಧನ ಧರ್ಮಪುನರುಜ್ಜೀವನ ಕಾರ್ಯದಲ್ಲಿ ಇಡೀ ನಾಡೇ ನೆರವಾಯಿತು.

ರಾಜರು ತಮ್ಮ ರಾಜಕಾರ್ಯದಲ್ಲೂ ಬುದ್ಧನ ಆಣತಿ ಮನ್ನಿಸುತ್ತಿದ್ದರು. ಶಾಕ್ಯರಿಗೂ ಕೋಲಿಯರಿಗೂ ಒಮ್ಮೆ ಸಮರವೊದಗುವ ಪ್ರಸಂಗ ಎದ್ದಾಗ ಬುದ್ಧನೇ ಮಧ್ಯಸ್ಥಿಕೆ ಮಾಡಿ ಎರಡೂ ಪಕ್ಷದವರನ್ನೂ ಕಂಡು, ಈ ವಿಪತ್ತನ್ನು ತಪ್ಪಿಸಿದ. ಮಗಧದ ಅಜಾತಶತ್ರು ಮತ್ತು ಕೋಸಲದ ಪ್ರಸೇನಜಿತರಿಬ್ಬರೂ ತಮಗೆ ಸಂದೇಹ ಬಂದಾಗಲೆಲ್ಲ ಬುದ್ಧನ ಬಳಿ ಓಡುತ್ತಿದ್ದರು. ಸೇನಾಧಿಕಾರಿಗಳು ಮತ್ತು ದಳ ಪತಿಗಳು ಸದ್ವರ್ತನೆಯ ಬಗ್ಗೆ ಬುದ್ಧನ ಉಪದೇಶ ಗ್ರಹಿಸುತ್ತಿದ್ದರು.

ಈತ ಕಪಿಲ ವಸ್ತುವಿಗೆ ಬಂದಿದ್ದಾಗ ಈತನನ್ನು ಸೇರಿದ ಬಂಧುಗಳಲ್ಲಿ ದೇವದತ್ತನೂ ಒಬ್ಬ. ಈ ತರುಣನು ಬುದ್ಧನ ಪೂರ್ವಾಶ್ರಮದ ಪತ್ನಿ ಯಶೋಧರೆಯ ಅಣ್ಣನೆಂದೂ ಸುಪ್ರಬುದ್ಧರಾಜನ ಮಗನೆಂದೂ ಹೇಳಿತ್ತಾರೆ. ಭಿಕ್ಷುವಾಗಿ ಸಂಘ ಸೇರಿದರೂ ದೇವದತ್ತನಿಗೆ ಧರ್ಮದಲ್ಲಿ ನಿಜವಾದ ಶ್ರದ್ಧೆ ಮೂಡಿರಲಿಲ್ಲ. ಬುದ್ಧನ ಪ್ರಖ್ಯಾತಿ ಕಂಡು ಕರುಬುತ್ತಿದ್ದ. ಬುದ್ಧನಿಗೆ ವಯಸ್ಸಾಗಿ ವೃದ್ಧಾಪ್ಯ ಮೂಡಿದಾಗ ಅವನು ನಾಯಕತ್ವದಿಂದ ವಿರಮಿಸಬೇಕೆಂದೂ ತನ್ನನ್ನು ಸಂಘಾಧಿಪತಿಯಾಗಿ ನಿಯಮಿಸಬೇಕೆಂದೂ ಸಲಹೆ ಮಾಡಿದ. ಬುದ್ಧ ಅದಕ್ಕೆ ಸಮ್ಮತಿಸದಿರಲು ವೈರವನ್ನು ಸಾಧಿಸಿ ಸಂಘದಿಂದ ದೂರವಾಗಿ ಹಲವಾರು ಬಗೆಗಳಲ್ಲಿ ಬುದ್ಧನಿಗೆ ಅಹಿತವನ್ನೆಣಿಸಿದ. ದಶಬಲನೆಂಬ ಮಾಂತ್ರಿಕನನ್ನು ಹಿಡಿದು ಅವನ ಮೂಲಕ ಮಗಧದ ರಾಜ ಅಜಾತ ಶತ್ರುವಿನ ಸ್ನೇಹ ಸಂಪಾದಿಸಿ ಅವನ ಬಲದಿಂದ ಒಮ್ಮೆ ಬುದ್ಧನನ್ನು ಕೊಲೆ ಮಾಡಲೆತ್ನಿಸಿದ. ಬುದ್ಧ ಒಂದು ಬಾರಿ ಅಡವಿಯಲ್ಲಿದ್ದಾಗ ದೊಡ್ಡದೊಂದು ಬಂಡೆಯನ್ನು ಅವನ ಮೇಲೆ ಉರುಳಿಸಲು ವ್ಯವಸ್ಥೆ ಮಾಡಿದ; ಊರಿನಲ್ಲಿದ್ದಾಗ ಮಾಲಾಗಿರಿಯೆಂಬ ಮದದಾನೆ ಅವನ ಮೇಲೆ ನುಗ್ಗುವಂತೆ ಮಾಡಿದ. ಆದರೆ ಈ ಪ್ರಯತ್ನಗಳೆಲ್ಲ ವಿಫಲವಾದುವು. ಅಜಾತಶತ್ರು ತನ್ನ ತಪ್ಪು ತಿಳಿದುಕೊಂಡು ದೇವದತ್ತನ ಸಂಗದಿಂದ ದೂರವಾಗಿ ಬುದ್ಧನ ಉಪಾಸಕನಾದ. ಇತಿವುತ್ತಕದಲ್ಲಿ ದೇವದತ್ತನ ಪ್ರಸಂಗ ಕುರಿತು ಸಮುದ್ರಕ್ಕೆ ಒಂದು ಬಿಂದಿಗೆ ವಿಷಹಾಕಿದಂತೆ ದೇವದತ್ತನ ಯತ್ನ ನಿಷ್ಫಲವಾಯಿತೆಂದು ಬಣ್ಣಿಸಲಾಗಿದೆ. ಬುದ್ಧನಿದ್ದಾಗಲೇ ದೇವದತ್ತ ತೀರಿಕೊಂಡ. ಬುದ್ಧನ ಸಂಘದಲ್ಲಿ ಒಡಕುಂಟುಮಾಡಲು ಇದೊಂದೇ ಯತ್ನವಾದದ್ದು.

ಬುದ್ಧನಿಗೆ ಐವತ್ತಾರು ವರ್ಷ ವಯಸ್ಸಾದಾಗ ದೇಹದಲ್ಲಿ ದೌರ್ಬಲ್ಯದ ಚಿಹ್ನೆಗಳು ಕಾಣಿಸಿಕೊಂಡುವು. ಸತತವಾದ ತಿರುಗಾಟದಿಂದ ತನ್ನ ಕೆಲಸಗಳನ್ನು ತಾನೇ ತೀರಿಸಿಕೊಳ್ಳಲು ತೊಂದರೆಯಾಯಿತು. ಆಗ ಅವನ ಪರಿಚಾರಿಕೆಗೆ ಆನಂದನೆಂಬ ಜ್ಞಾತಿ ಶಿಷ್ಯ ನಿಯಮಿತನಾದ. ಬುದ್ಧ ಹೋದಲ್ಲೆಲ್ಲ ಅವನ ಜೊತೆಗಿದ್ದು ಅವನ ದಿನದಿನದ ಅಗತ್ಯಗಳನ್ನು ನೋಡಿಕೊಂಡು ಅವನ ಸೇವೆ ಮಾತಿ ಕೃತಾರ್ಥನಾದ.

ಬುದ್ಧ ಎಪ್ಪತ್ತೊಂಬತ್ತು ವರ್ಷಗಳು ದಾಟಿದ ಸಮಯದಲ್ಲಿ ವೈಶಾಲಿಯಿಂದ ವಜ್ಜಿ ರಾಜ್ಯದಲ್ಲಿದ್ದ ಬೆಲುವಗ್ರಾಮಕ್ಕೆ ಆನಂದನೊಡಗೂಡಿ ಹೊರಟ. ಆಗ ವಜ್ಜಿ ರಾಜ್ಯದ ಹಲವೆಡೆ ಕ್ಷಾಮವಿತ್ತು. ಈ ಕಾರಣದಿಂದ ತನ್ನ ಅಮಿತವಾದ ಪರಿವಾರವನ್ನು ವೈಶಾಲಿಯಲ್ಲೇ ಬಿಟ್ಟು ಆನಂದನನ್ನು ಮಾತ್ರ ಅಲ್ಲಿಗೆ ಕರೆದೊಯ್ದಿದ್ದ. ಅಲ್ಲಿ ಬುದ್ಧನಿಗೆ ಅಸ್ವಾಸ್ಥ್ಯ ತಲೆದೋರಿತು. ಕಡೆಗಾಲ ಸಮೀಪಿಸುತ್ತಿರುವಂತೆ ತೋರಿತು. ಆದರೆ ಆರೋಗ್ಯ ಸ್ವಲ್ಪ ಸುಧಾರಿಸಿದೊಡನೆ ಅಲ್ಲಿಂದ ಪಾವಾನಗರಿಗೆ ಹೊರಟ. ಆ ನಗರದಲ್ಲಿ ಚುಂದ ಎಂಬ ಕಮ್ಮಾರ ಬುದ್ಧನನ್ನು ತನ್ನ ಮನೆಗೆ ಭಿಕ್ಷೆಗೆ ಕರೆದು ಸೂಕರಮದ್ದವವೆಂಬ ತಿನಿಸು ಕೊಟ್ಟ. ಇದನ್ನು ತಿಂದ ಒಡನೆ ಬುದ್ಧನಿಗೆ ಉದರಶೂಲೆ, ಆಮಶಂಕೆ ತಳೆಯಿಟ್ಟುವು. ಆದರೆ ಬುದ್ಧ ಆನಂದನ ಜೊತೆಯಲ್ಲಿ ಅಲ್ಲಿಂದ ಹೊರಟು ಆಮ್ರಗ್ರಾಮ, ಜಂಬುಗ್ರಾಮ, ಭಂಡಗ್ರಾಮ, ಹಸ್ತಿ ಗ್ರಾಮ, ಭೋಗನಗರಗಳನ್ನು ದಾಟಿ ಮಲ್ಲರ ರಾಜ್ಯಕ್ಕೆ ಬಂದ. ಅದರ ಉಪವರ್ತನದಲ್ಲಿಯ ಕುಶೀನಗರಕ್ಕೆ ಹೋಗಲು ಹಿರಣ್ಯವತೀ ನದಿ ದಾಟಿ ಸಾಲುಮರಗಳ ತೋಪಿಗೆ ಬಂದ. ಆ ವೇಳೆಗೆ ಬುದ್ಧನಿಗೆ ಅತಿಯಾದ ಭಾದೆಯಿಂದ ಆಯಾಸವಾಗಿತ್ತು. ಎರಡು ಮರಗಳ ನಡುವೆ ಹಾಸಿಗೆ ಹರಡುವಂತೆ ಆನಂದನಿಗೆ ಹೇಳಿ ಹಾಸಿಗೆ ಸಿದ್ಧವಾದಾಗ ಬಲಪಾಶ್ರ್ವದಲ್ಲಿ ಬಲತೋಳಿನ ಮೇಲೆ ತಲೆ ಇಟ್ಟು ಮಲಗಿದ. ಬುದ್ಧನಿಗೆ ಸಾವು ಸನ್ನಿಹಿತವಾಯಿತೆಂದು ಅರಿತು ಆನಂದ ಹತ್ತಿರದ ವಿಹಾರವೊಂದರ ಬಾಗಿಲಿಗೆ ಮೈ ಆನಿಸಿ ಅಳುತ್ತಿದ್ದ. ಅದನ್ನು ತಿಳಿದು ಬುದ್ಧ ಅವನನ್ನು ಕರೆದು ಸಂತೈಸಿದ. ಜಗತ್ತು ಕತ್ತಲೆಯಲ್ಲಿದ್ದಾಗ ತಥಾಗತ ಜ್ಞಾನದ ದೀವಿಗೆ ಹೊತ್ತಿಸಿದ. ಅದು ಲೋಕದಲ್ಲಿ ಬೆಳಗುವ ಮೊದಲೇ ದೀಪ ನಂದಿಹೋಗುವುದಲ್ಲ. ನಾನಿನ್ನೂ ಕಲಿಯುವುದರಲ್ಲೇ ಇದ್ದೇನೆ; ಗುರಿ ತುಂಬ ದೂರವೇ ಇದೆ. ಅಷ್ಟರೊಳಗೆ ನನ್ನ ಮೇಲೆ ಕರುಣೆ ತೋರಿದ ತಥಾಗತ ತೀರಿಕೊಳ್ಳುತ್ತಿದ್ದಾನೆ ಎಂದು ಆನಂದನಿಗೆ ದುಃಖ. ಆಗ ಬುದ್ಧ ಆನಂದನನ್ನು ಕುರಿತು ನೀನು ನನ್ನನ್ನು ಬಹು ವಿಧದಿಂದ ಉಪಚರಿಸಿದ್ದೀಯೇ, ಅಳಬೇಡ. ಯಾರಾದರೂ ಒಂದಿಲ್ಲ ಒಂದು ದಿನ ಸಾಯಲೇ ಬೇಕಲ್ಲವೆ? ಹುಟ್ಟಿದವರು ಯಾರಾದರೂ ಶಾಶ್ವತವಾಗಿ ಇರುತ್ತಾರೆಯೆ? ನೀನು ಸ್ಥೈರ್ಯದಿಂದ ಪ್ರಯತ್ನಪಟ್ಟು ನಿನ್ನ ಮುಕ್ತಿ ಸಾಧಿಸಿಕೋ ಎಂದು ಹೇಳಿದ. ಸ್ವಲ್ಪ ಹೊತ್ತಾದ ಅನಂತರ ಸುಭದ್ರನೆಂಬ ವೃದ್ಧ ಪರಿವ್ರಾಜಕ ಬುದ್ಧನ ಬಳಿ ಧರ್ಮಜಿಜ್ಞಾಸೆ ಮಾಡಲು ಬಂದ. ಬುದ್ಧನಿಗೆ ಆಯಾಸವಾಗಿದೆ ಎಂದು ಹೇಳಿ ಆನಂದ ಆವನನ್ನು ತಡೆದಾಗ, ಬುದ್ಧ ತಡೆಯಬೇಡ ಆನಂದ, ಬರಲಿ ಬಿಡು ಎಂದು ಕರೆದ. ಸುಭದ್ರ ಸ್ವಲ್ಪ ಹೊತ್ತು ಧರ್ಮಸಂವಾದ ಮಾಡಿ ಹೊರಟ. ಚುಂದ ಕೊಟ್ಟ ಭಿಕ್ಷೆ ಬುದ್ಧನಿಗೆ ಕಡೆಯ ಭಿಕ್ಷೆ; ಸುಭದ್ರನಿಗೆ ಮಾಡಿದ ಉಪದೇಶ ಅವನ ಕಡೆಯ ಉಪದೇಶ.
ಅದಾದ ಮೇಲೆ ಹತ್ತಿರದಲ್ಲಿದ್ದ ಭಿಕ್ಷುಗಳನ್ನೆಲ್ಲ ಕರೆದು ಭಿಕ್ಷುಗಳೇ, ನಿಮಗೆ (ಕಡೆಯ ಬಾರಿ) ಹೇಳುತ್ತಿದ್ದೇನೆ. ಇರುವವೆಲ್ಲ ಒಡೆಯುವವೇ; ಅಲಸಿಕೆಯಿಲ್ಲದೆ ನಿಮ್ಮ ಮುಕ್ತಿ ಸಾಧಿಸಿಕೊಳ್ಳಿ ಎಂದು ಹೇಳಿದ. ಈ ಅಂತಿಮ ಬುದ್ಧವಚನವನ್ನು ಬೌದ್ಧರು ಭಕ್ತಿಯಿಂದ ಉಳಿಸಿಕೊಂಡಿದ್ದಾರೆ. ಹೀಗೆ ಹೇಳಿದ ಬಳಿಕ ಬುದ್ಧ ಸ್ಥತ ಪ್ರಜ್ಞನಾಗಿ ಧ್ಯಾನ ಸಮಾಧಿಯಲ್ಲಿ ಮುಳಿಗಿ ತೀರಿಕೊಂಡ. ಬುದ್ಧನ ಮರಣವನ್ನು ಮಹಾಪರಿನಿರ್ವಾಣ ಎಂದು ನಿರ್ದೇಶಿಸಿದ್ದಾರೆ. ಆತನ ಕಡೆಯ ದಿನಗಳನ್ನು ವಿವರವಾಗಿ ನಿರೂಪಿಸುವ ದೊಡ್ಡ ಸೂತ್ರ ಮಹಾಪರಿನಿರ್ವಾಣ ಸುತ್ರಾಂತ (ಮಹಾಪರಿನಿಬ್ಬಾನಸುತ್ತಂತ) ತ್ರಿಪಿಟಕದ ದೀರ್ಘನಿಕಾಯದಲ್ಲಿ ಅಡಕವಾಗಿದೆ.
ಬುದ್ಧನ ಪರಿನಿರ್ವಾಣವಾದದ್ದು ವೈಶಾಖ ಪೂರ್ಣಿಮೆಯಂದು. ಬೌದ್ಧರಿಗೆ ವೈಶಾಖಮಾಸದ ಹುಣ್ಣಿಮೆ ತುಂಬ ಪವಿತ್ರ. ಏಕೆಂದರೆ ಈ ದಿನದಲ್ಲೇ ಬುದ್ಧನ ಜನ್ಮ, ಸಂಬೋಧಿ ಪ್ರಾಪ್ತಿ ಮತ್ತು ಪರಿನಿರ್ವಾಣ ಈ ಮೂರು ಘಟನೆಗಳು ಜರುಗಿದ್ದು. ಬುದ್ಧ ತೀರಿಕೊಂಡಾಗ ಅವನಿಗೆ ಎಂಬತ್ತು ವರ್ಷ; ಈ ವರ್ಷ ಕ್ರಿಸ್ತ ಪೂರ್ವ 543 ಎಂದೂ 490 ಎಂದೂ 486 ಎಂದೂ 483 ಎಂದೂ ಪಂಡಿತರು ವಿಧವಿಧವಾಗಿ ಊಹೆ ಮಾಡಿದ್ದಾರೆ; ಇವಕ್ಕೆ ಸರಿಯಾಗಿ ಬುದ್ಧನ ಜನ್ಮದ ವರ್ಷ ಕ್ರಿ.ಪೂ. 623, ಅಥವಾ 570 ಅಥವಾ 566 ಅಥವಾ 563 ಆಗುತ್ತದೆ.

ಬುದ್ಧ ತೀರಿಕೊಂಡದ್ದು ಮಲ್ಲರ ರಾಜ್ಯದಲ್ಲಿ. ಆದ್ದರಿಂದ ಮಲ್ಲ ನಾಯಕರೇ ಅವನ ಅಂತ್ಯ ಕ್ರಿಯೆಯ ವ್ಯವಸ್ಥೆ ಮಾಡಿದರು. ಅವರು ತುಂಬ ವೈಭವದಿಂದ ತುಂಬ ಆದರದಿಂದ ಬುದ್ಧಚಿತೆಯನ್ನು ಸಿದ್ಧಮಾಡಿ ಅಗ್ನಿಸ್ಪರ್ಶ ಮಾಡಲು ಎಷ್ಟು ಯತ್ನಿಸಿದರೂ ಆಗಲಿಲ್ಲವಂತೆ. ಅಷ್ಟರಲ್ಲಿ ಬುದ್ಧನನ್ನು ಕಾಣಲು ದೂರ ದೇಶದಿಂದ ಅವನ ಶಿಷ್ಯ ಕಾಶ್ಯಪ ಹಾಗೂ ಅವನ ಐನೂರು ಮಂದಿ ಸಹಚರರು ಬಂದರು. ಕಾಶ್ಯಪ ಬುದ್ಧನ ಕಳೇಬರದ ಬಳಿ ಬಂದು ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಒಡನೆಯೇ ಚಿತೆಗೆ ಬೆಂಕಿ ಇದ್ದಕ್ಕಿದಂತೆ ಹತ್ತಿಕೊಂಡಿತು. ಚಿತೆಯಿಂದ ಅವಶೇಷಗಳನ್ನು ಕುಶೀನಗರದ ಮಲ್ಲರು ಸಂಚಯನ ಮಾಡಿ ತಾವೇ ಅದರ ಮೇಲೆ ಸ್ತೂಪ ಕಟ್ಟಿಸುವ ಸಂಕಲ್ಪ ಮಾಡಿದರು. ಆದರೆ ಅಲ್ಲಿ ನೆರೆದಿದ್ದ ಇತರರು ತಮಗೂ ಅವಶೇಷದಲ್ಲಿ ಪಾಲು ಬೇಕೆಂದು ಬಲವಂತ ಮಾಡಿದರು. ಮಲ್ಲರು ಒಪ್ಪಲಿಲ್ಲ. ದೊಡ್ಡ ಕಲಹ ಏಳುವುದರಲ್ಲದ್ದಿತು. ಆಗ ದ್ರೋಣನೆಂಬ ಬ್ರಾಹ್ಮಣ ಮುಂದೆ ಬಂದು ಬುದ್ಧ ಶಾಂತಿಮೂರ್ತಿ; ಅವನ ಅವಶೇಷಕ್ಕಾಗಿ ಕಲಹ ಸಲ್ಲದು ಎಂದು ಹೇಳಿ ಬೇಡಿದ ಎಲ್ಲರಿಗೂ ಭಾಗ ಮಾಡಿ ಕೊಡುವುದು ಯುಕ್ತವೆಂದು ಸಲಹೆ ಮಾಡಿದ. ಮಲ್ಲರು ಇದಕ್ಕೊಪ್ಪಿ ತಾವು ಸಂಚಯನ ಮಾಡಿದ್ದ ಅವಶೇಷವನ್ನೆಲ್ಲ ಅವನ ಕೈಗಿತ್ತು ಅವನಿಗೇ ಹಂಚುವ ಹೊಣೆವಹಿಸಿದರು. ದ್ರೋಣ ಅದನ್ನು ಎಂಟು ಭಾಗ ಮಾಡಿ ತಲಾ ಒಂದನ್ನು ಮಗಧದ ರಾಜ ಅಜಾತಶುತ್ರುವಿಗೆ, ವೈಶಾಲಿಯ ಲಿಚ್ಛವಿಗಳಿಗೆ, ಕಪಿಲ ವಸ್ತುವಿನ ಶಾಕ್ಯರಿಗೆ ಅಲ್ಲಕಪ್ಪದ ಬುಲಿಜನರಿಗೆ ರಾಮಗ್ರಾಮದ ಕೋಲಿಯರಿಗೆ ವೇಠದ್ವೀಪದ ಬ್ರಾಹ್ಮಣನಿಗೆ ಪಾವಾನಗರದ ಮಲ್ಲರಿಗೆ ಮತ್ತು ಕುಶೀ ನಗರದ ಮಲ್ಲರಿಗೆ ಹಂಚಿದ. ಸಮರ್ಪಕವಾಗಿ ವಿತರಣೆ ಮಾಡಿದುದಕ್ಕಾಗಿ ಅವಶೇಷವಿದ್ದ ಗಡಿಗೆಯನ್ನು (ಕುಂಭ) ದ್ರೋಣನಿಗೆ ಕೊಟ್ಟರು. ವಿಭಾಗವೆಲ್ಲ ಮುಗಿದ ಮೇಲೆ ಪಿಪ್ಪಿಲಿ ವನದ ಮೌರ್ಯರು ಬಂದು ತಮಗೊಂದು ಭಾಗ ಬೇಕೆಂದು ಬೇಡಿದರು. ಆ ಹೊತ್ತಿಗೆ ಚಿತಾಗ್ನಿಯಲ್ಲಿ ಕೆಲವು ಕೆಂಡಗಳು ಉಳಿದಿದ್ದುವು. ಅವನ್ನೆಲ್ಲ ಆಯ್ದು ಅವರ ಪಾಲಿಗೆ ಕೊಟ್ಟರು. ಹೀಗೆ ಅವಶೇಷದಲ್ಲಿ ಹತ್ತು ಭಾಗವಾಗಿ ಒಂದೊಂದು ಭಾಗದ ಮೇಲೂ ಒಂದೊಂದು ಸ್ತೂಪ ನಿರ್ಮಾಣವಾಯಿತು. ಈ ಹತ್ತು ಸ್ತೂಪಗಳೆ ಮೊದಲಿಗೆ ಬೌದ್ಧ ಶ್ರದ್ಧಾಳುಗಳ ಯಾತ್ರಾಸ್ಥಾನಗಳಾಗಿ ಪರಿಣಮಿಸಿದವು. ಮೌರ್ಯರಾಜನಾದ ಅಶೋಕ ಈ ಸ್ತೂಪಗಳನ್ನೆಲ್ಲ ಸಂದರ್ಶಿಸಿ ಸ್ತಂಭ ಶಾಸನಗಳನ್ನು ನೆಡಿಸಿದನೆಂಬ ನಂಬಿಕೆಯಿದೆ.

ಐತಿಹಾಸಿಕ ವ್ಯಕ್ತಿಯಾದ ಬುದ್ಧ ಸಾಮಾನ್ಯ ವ್ಯಕ್ತಿಯಂತೆ ಹುಟ್ಟಿ ಬೆಳೆದು ತನ್ನ ಪ್ರತಿಭೆಯಿಂದಲೂ, ಪ್ರಯತ್ನದಿಂದಲೂ ಲೋಕೋತ್ತರ ಸಂಬೋಧಿ ಪಡೆದು ಬುದ್ಧನಾದ ಎಂದು ಹಳೆಯ ಥೇರವಾದದವರ ಕಲ್ಪನೆ. ಅವರ ದೃಷ್ಟಿಯಲ್ಲಿ ಬುದ್ಧ ಗುರು (ಸತ್ಥಾ, ಶಾಸ್ತ್ರ) ವಷ್ಟೆ. ಅವನನ್ನು ಪೂಜಿಸುವಾಗ ಅವರ ಶ್ರದ್ಧೆ ತಮ್ಮ ಧರ್ಮದ ಪ್ರವರ್ತಕ ಪುರುಷನೆಂಬುದು ಮಾತ್ರ. ಇದರಲ್ಲಿ ದೈವತ್ವದ ಕಲ್ಪನೆಯಿಲ್ಲ. ಬುದ್ಧ ಬೋಧಿವೃಕ್ಷದ ಅಡಿಯಲ್ಲಿ ಸಂಬೋಧಿ ಪಡೆದಾಗಲೇ ನಿರ್ಮಾಣ ಸಿದ್ಧಿಸಿತು, ಮುಕ್ತನಾದ.
ಆ ಸಮಯದಲ್ಲಿ ಬುದ್ಧನೇ ಎಳೆದ ಉದ್ಗಾರ ಕಾಮಾಸವ, ಭವಾಸವ, ದೃಷ್ಟ್ಯಾಸವ, ಅವಿದ್ಯಾಸವಗಳಿಂದ ಮುಕ್ತನಾದೆ, ಜ್ಞಾನ ಒದಗಿತು (ಜಾಣಂ ಲಿಹೋಸಿ), ಜನ್ಮ ಮುಗಿಯಿತು (ಖೀಣಾ ಮೇ ಜಾತಿ) ಬ್ರಹ್ಮಚರ್ಯ ಕಳೆದದ್ದಾಯಿತು. (ಪುಸಿತಂ ಬ್ರಹ್ಮಚರಿಯಂ) ಮಾಡಬೇಕಾದದ್ದು ಮಾಡಿಯಾಯಿತು. (ಕತಂ ಕರಣೀಯಂ) ಇನ್ನೇನೂ ಉಳಿದಿಲ್ಲ (ನಾಪರಂ ಇತ್ಥತ್ಥಾಯ) ಎಂದು. ಸಂಸಾರದ ಸಂಕೋಲೆ ಕಳಚಿ ಬಿದ್ದರೂ ಆಯುಷ್ಯ ಮುಗಿಯಲಿಲ್ಲವಷ್ಟೆ. ಆದ್ದರಿಂದ ಸಂಪೂರ್ಣ ಮುಕ್ತಿ ಸಿದ್ಧವಾಗಲಿಲ್ಲ. ಆಯುಷ್ಯ ಸವೆದು ಶರೀರ ಪಾತವಾದಾಗ ಬುದ್ಧ ಸಂಪೂರ್ಣವಾಗಿ ಮುಕ್ತನಾದ. ಸಂಬೋಧಿಕಾಲದಲ್ಲಿ ಪಡೆದ ನಿರ್ವಾಣ ಸೋಪಾಧಿಕ ನಿರ್ಮಾಣ; ವೇದಾಂತಿಗಳ ಜೀವನ್ಮುಕ್ತಿಯಂತೆ. ಕುಶೀನಗರದಲ್ಲಿ ತೀರಿಕೊಂಡಾಗ ಪಡೆದ ನಿರ್ವಾಣ, ವೇದಾಂತಿಗಳ ನರುಪಾಧಿಕ ವಿದೇಹ ಮುಕ್ತಿಯಂತೆ. ಪರಿನಿರ್ವಾಣವಾದ ಅನಂತರವೂ ಬುದ್ಧನಿದ್ಧಾನೆಂದು ಥೇರವಾದಿಗಳು (ಪ್ರಾಚೀನರಾದ ಸ್ಥವಿರವಾದಿಗಳು) ನಂಬುವುದಿಲ್ಲ. ಮಜ್ಞಿಮನಿ ಕಾಯದಲ್ಲಿ ಗೋಪಕ ಮೊಗ್ಗಲ್ಲಾನ ಸುತ್ತವೆಂಬ ಪ್ರಕರಣದಲ್ಲಿ ಬುದ್ಧ ತೀರಿಕೊಂಡ ಬಳಿಕ ವರ್ಷಾಕರನೆಂಬ ಬ್ರಾಹ್ಮಣ ಆನಂದನೊಂದಿಗೆ ಮಾಡಿದ ಸಂವಾದ ಇದಕ್ಕೆ ಪುಷ್ಟಿ ಕೊಡುತ್ತದೆ. ವರ್ಷಾಕರ ಗೋತಮ 'ತನ್ನ ಸಂಘವನ್ನು ನಿರ್ವಹಿಸಲು ಯಾರನ್ನಾದರೂ ನಿಯಮಿಸಿ ತೀರಿಕೊಂಡನೆ ?' ಎಂದು ಕೇಳಿದ. ಆನಂದ ಇಲ್ಲವೆಂದ. ಮತ್ತೆ ವರ್ಷಾಕರ ಹಾಗಿದ್ದರೆ ಬುದ್ಧ ತೀರಿಕೊಂಡ ಬಳಿಕ ನೀವೂ ಯಾರನ್ನಾದರೂ ನಿಯಮಿಸಿದ್ದೀರಾ ? ಎಂದು ಕೇಳಿದ. ಆನಂದ ಅದಕ್ಕೂ ಇಲ್ಲವೆಂದ. 'ಹಾಗಿದ್ದರೆ ಸಂಘ ಒಡೆಯದೆ ಇರುವುದು ಹೇಗೆ ?' ಎಂಬ ವರ್ಷಾಕರನ ಪ್ರಶ್ನೆಗೆ ಉತ್ತರವಾಗಿ ಆನಂದ 'ಸಂಘಕ್ಕೆ ಇಂಥ ವ್ಯಕ್ತಿಯ ಅಗತ್ಯವಿಲ್ಲ. ಬುದ್ಧ ಹೇಳಿದ ಧರ್ಮವೇ ನಮಗೆ ಶರಣ' ಎಂದು ಹೇಳಿದ. ಎಂದರೆ ಬುದ್ಧನ ಅನಂತರ ಬೌದ್ಧರಿಗೆ ಸ್ಪೂರ್ತಿದಾಯಕವಾದುದು, ಮಾರ್ಗದರ್ಶಕವಾದುದು ಧರ್ಮವಷ್ಟೆ. ಈ ಧರ್ಮದ ನೆರಳಿನಲ್ಲಿ ನಡೆಯುವ ಸಂಘ ಧರ್ಮದ ಶರೀರವಿದ್ದಂತೆ. ಸಂಘಕ್ಕೆ ಧರ್ಮವೇ ಆತ್ಮ. ಇದಕ್ಕೆ ನಿಮಿತ್ತಕಾರಣನಾದವ ಬುದ್ಧ. ಮಿಳಿಂದ ಪ್ರಶ್ನೆಯಲ್ಲಿಯೂ ಇದೇ ಕಲ್ಪನೆ ಕಾಣಬರುತ್ತದೆ. ತ್ರಿಪಿಟಕದಲ್ಲಿಯೇ ಯಾರು ಧರ್ಮವನ್ನು ಕಾಣುತ್ತಾರೋ ಅವರು ನನ್ನನ್ನು ಕಾಣುತ್ತಾರೆ; ಯಾರು ನನ್ನನ್ನು ಕಾಣವರೊ ಅವರು ಧರ್ಮವನ್ನು ಕಾಣುವರು (ಯೋ ಧಮ್ಮಂ ಪಸ್ಸತಿ ಸ ಮಂಪಸ್ಸತಿ; ಯೋ ಮಂ ಪಸ್ಸತಿ, ಸ ಧಮ್ಮಂ ಪಸ್ಸತಿ) ಎಂದು ಬುದ್ಧನೇ ಹೇಳಿದಂತೆ ಪ್ರಸ್ತಾಪಿದೆ. ಬೌದ್ಧರು ಹೀಗೆ ಬುದ್ಧ, ಧರ್ಮ, ಸಂಘಗಳಿಗೆ ತಾದಾತ್ಮ್ಯ ಹೇಳುತ್ತಾರೆ. ಈ ದೃಷ್ಟಿಯಿಂದಲೇ ಒಂದೇ ತತ್ತ್ವವನ್ನು ತ್ರಿಪಿಟೀಕರಣ ಮಾಡಿ

ಬುದ್ಧಂ ಶರಣಂ ಗಚ್ಛಾಮಿ
ಧರ್ಮಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಛಾಮಿ

ಎಂದು ಹೇಳಿಕೊಳ್ಳುತ್ತಾರೆ. ಈ ಶರಣಗಮನದಲ್ಲಿ ನಾಲ್ಕು ದೃಷ್ಟಿಗಳು: ಅರಿವಿನಿಂದ ಆತ್ಮನಿವೇದನ ಮಾಡಿಕೊಳ್ಳುವ ದೃಷ್ಟಿ (ಅತ್ತಸನ್ನಿಯ್ಯಾತನ); ತತ್ತ್ವಗಳಲ್ಲಿ ಮನಸ್ಸು ನಿಲ್ಲಿಸುವ ದೃಷ್ಟಿ (ತಪ್ಪರಾಯನ); ಶಿಷ್ಯನಂತೆ ಭಾವಶುದ್ಧಿ ಮಾಡಿಕೊಳ್ಳುವದೃಷ್ಟಿ (ನಿಸ್ಸಭಾವೂಪಗಮನ); ಮತ್ತು ಅಗ್ರಮರ್ಯಾದೆಗೆ ಯೋಗ್ಯವಾದ ವಸ್ತುಗಳಿಗೆ (ಅಗ್ಗದಕ್ಖಿಣೇಯ್ಯ) ನಮಸ್ಕರಿಸುವ ದೃಷ್ಟಿ (ಪಣಿಪಾತ) ಇವುಗಳಲ್ಲಿ ಮೊದಲ ಮೂರು ಥೇರವಾದದವರಿಗೆ ಮುಖ್ಯ, ನಾಲ್ಕನೆಯದು ಗೌಣ.

ಆದರೆ ಮುಂದೆ ಬಂದ ಮಹಾಸಾಂಘಿಕರಿಗೆ ಮಹಾಯಾನದವರಿಗೆ ಬುದ್ಧ ಬರಿಯ ಮನುಷ್ಯ ಗುರುವಲ್ಲ; ದೇವರು. ಅವನ ಶೀಲ ಪ್ರಜ್ಞೆ ಮುಖ್ಯವಲ್ಲ; ಕಾರುಣ್ಯ ಮುಖ್ಯ. ಕಪಿಲವಸ್ತುವಿನಲ್ಲಿ ಶುದ್ಧೋದನನ ಮಗನಾಗಿ ಅವನು ಅವತರಿಸಿದನಷ್ಟೇ. ಅದಕ್ಕೆ ಮೊದಲೂ ಅವನ ಕುಷಿತ ಸ್ವರ್ಗದಲ್ಲಿದ್ದ ಬೋಧಿ ಸತ್ತ್ವನೋ, ಅವನ ಮಹಾಭಿನಿಷ್ಕ್ರಮಣ ಸಂಬೋಧಿ, ನಿರ್ವಾಣಗಳೆಲ್ಲ ಲೋಕಸಂಗ್ರಹಕ್ಕಾಗಿ, ವಾಸ್ತವವಾಗಿ ಅವನ ಆಗಮನವೂ ಇಲ್ಲ. ಗಮನವೂ ಇಲ್ಲ; ಅವನು ತಥಾಗತ. ಪಾರಮಾರ್ಥಿಕವಾದ ಧರ್ಮಕಾಯ ಸಾಮಾನ್ಯ ಜನರ ಸಂವೃತಿ ಸ್ಥಿತಿಗೆ ಅನುವಾಗಿ ಜಾತಕಾಯವನ್ನು ಧರಿಸಿ ಬರುವುದೆಂದೂ ಶಾಕ್ಯಮುನಿ ಪರಮ ತತ್ತ್ವಗಳಾದ ಕರುಣೆ, ಬಲಗಳ ವ್ಯಾವಹಾರಿಕ ಮೂರ್ತಿಯೆಂದೂ ನಾಗಾರ್ಜುನನ ಅಭಿಪ್ರಾಯ. ಬುದ್ಧ ಅವತರಿಸಲು ಆಕರವಾಗಿ ಧರ್ಮವಿದೆ; ಇದನ್ನು ಶೂನ್ಯತಾ, ಧರ್ಮ ಕಾಯ, ತಥಥಾ ಧರ್ಮತಾ ಎಂದು ಮುಂತಾಗಿ ಕರೆದಿದ್ದಾರೆ. ನಮ್ಮ ಕಾಲದಲ್ಲಿ ಅವತರಿಸಿದ ಬುದ್ಧ ಅಸಂಖ್ಯೇಯ ಬುದ್ಧರಲ್ಲಿ ಒಬ್ಬನಷ್ಟೆ. ಮಹಾಯಾನದ ಮಹಾವಸ್ತುವೆಂಬ ಗ್ರಂಥ ಎಂಟು ಸಾವಿರ ಮಂದಿ ದೀಪಂಕರ ಬುದ್ಧರನ್ನೂ ಮೂವತ್ತು ಕೋಟಿ ಶಾಕ್ಯಮುನಿಗಳನ್ನೂ ಹೇಳುತ್ತದೆ. ಎಂದರೆ ಐತಿಹಾಸಿಕ ಬುದ್ಧನ ಗಣನೆ ಅವರಲ್ಲಿ ಅಷ್ಟಾಗಿ ಇಲ್ಲ.

ಮಹಾಯಾನ ಪಂಥದಲ್ಲಿ ಆದಿಬುದ್ಧ ಅಥವಾ ಪರಮಾದಿಬುದ್ಧನ ಕಲ್ಪನೆಯಿದೆ. ಈ ಬುದ್ಧನಿಗೆ ಉತ್ಪತ್ತಿ ನಿನಾಶಗಳಿಲ್ಲ; ಸ್ವಯಂಭು. ನೇಪಾಳದ ಖಾಟಮಂಡುವಿನಲ್ಲಿರುವ ಸ್ವಯಂಭುವಿನ ದೇವಾಲಯ ಈ ಆದಿಬುದ್ಧನದು. ಶೂನ್ಯತೆಯ ಮಡಿಲಿಂದ ಎದ್ದ ಈ ಆದಿಬುದ್ಧನಿಂದ ಐವರು ಧ್ಯಾನಿಬುದ್ಧರು ರೂಪ ತಳೆಯುವರು; ವೈರೋಚನ, ಅಕ್ಷೋಭ್ಯ, ರತ್ನಸಂಭವ, ಅಮಿತಾಭ ಮತ್ತು ಅಮೋಘಸಿದ್ಧ ಇವರೇ ಈ ಐವರು. ಆದಿ ಬುದ್ಧನದು ಪರಮಾರ್ಥ ಸ್ಥಿತಿಯಾದರೆ ಧ್ಯಾನಿ ಬುದ್ಧರು ಪ್ರವೃತ್ತಿಯಲ್ಲಿರುವವರು ಎಂದರೆ ವ್ಯವಹಾರ ಪ್ರಪಂಚದಲ್ಲಿ ನಿಂತವರು. ಇವರಿಗಾಗಿ ಚೈತ್ಯ ಮಂದಿರಗಳನ್ನು ನಿರ್ಮಿಸಿ ಇವರ ಅನುಗ್ರಹ ಪಡೆಯಲು ಪೂಜೆ ಪುರಸ್ಕಾರ ಸಲ್ಲಿಸುವ ಸಂಪ್ರದಾಯವುಂಟು. ಇವರಿಂದ ಐವರು ಧ್ಯಾನಿಬೋಧಿಸತ್ವರು ಅವತರಿಸುತ್ತಾರೆ. ವೈರೋಚನನಿಂದ ಸಮಂತ ಭದ್ರ, ಅಕ್ಷೋಭ್ಯನಿಂದ ವಜ್ರಪಾಣಿ, ರತ್ನಸಂಭವನಿಂದ ರತ್ನ ಸಂಭವನಿಂದ ರತ್ನಪಾಣಿ, ಅಮಿತಾಭನಿಂದ ಪದ್ಮಪಾಣಿ (ಅವಲೋಕಿತೇಶ್ವರ) ಮತ್ತು ಅಮೋಘಸಿದ್ಧನಿಂದ ವಿಶ್ವಪಾಣಿ-ಹೀಗೆ ಬೋಧಿಸತ್ವರು ಕಾಣಿಸಿಕೊಳ್ಳುತ್ತಾರೆ. ಇವರಿಂದ ಈ ಭೌತಿಕ ಪ್ರಪಂಚವೆಲ್ಲ ನಿರ್ಮಿತವಾಗಿದೆ. ಇವರುಗಳಿಗೆ ಸರಿಯಾಗಿ ಐವರು ಮಾನುಷೀಬುದ್ಧರು ಮನುಷ್ಯ ಲೋಕದಲ್ಲಿ ಅವತರಿಸುತ್ತಾರೆ. ಇವರು ಧ್ಯಾನಿಬುದ್ಧರ ಪ್ರತಿಬಿಂಬಗಳು. ಇದಕ್ಕೆ ನಿರ್ಮಾಣಕಾಯವೆಂದು ವ್ಯವಹಾರ. ಈ ಮಾನುಷೀ ಬುದ್ಧರಲ್ಲಿ ಶಾಕ್ಯಮುನಿಯೊಬ್ಬ. ಈ ಐವರು ಧ್ಯಾನಿಬುದ್ಧರನ್ನು ಮಂಡಲಗಳಲ್ಲಿ ವ್ಯವಸ್ಥೆ ಮಾಡಿ ವಜ್ರಯಾನದವರು ಅರ್ಚಿಸುತ್ತಾರೆ.
ಈ ಮಾನುಷೀ ಬುದ್ಧರಲ್ಲದೆ ಮಹಾಯಾನ ಪಂಥರಲ್ಲಿ ಮೈತ್ರೇಯನೆಂಬ ಅಗಾಮೀಬುದ್ಧನೂ ಭೈಷಜ್ಯಗುರುವೆಂಬ ಮತ್ತೊಬ್ಬ ಬುದ್ಧನೂ ಪೂಜೆಗೊಳ್ಳುತ್ತಾರೆ. ಮೈತ್ರೇಯ ಈಗ ತುಷಿತಸ್ವರ್ಗದಲ್ಲಿರುವ ಬೋಧಿಸತ್ವ. ಬೋಧಿ ಸತ್ವರ ಕಲ್ಪನೆ ಮಹಾಯಾನಕ್ಕೆ ವಿಶಿಷ್ಟವಾದುದು. ಬುದ್ಧನಾಗುವ ಮುಂಚೆ ತ್ಯಾಗ, ಕ್ಷಾಂತಿ ಮುಂತಾದ ಪಾರಮಿತಗಳನ್ನು ಅಭ್ಯಾಸ ಮಾಡಿ ಬುದ್ಧನ ಸಿದ್ಧಿಗೆ ಸಾಧನೆ ಮಾಡುತ್ತಿರುವ ಉದ್ಯಮಿಯೇ ಬೋಧಿಸತ್ವ (ಬೋಧಿಯೇ ಸತ್ವವಾಗಿ ಉಳ್ಳವ). ಬೋಧಿಯ ಯೋಗ್ಯತೆ ಒದಗಿದರೂ ಪ್ರಾಣಿಗಳ ಮೇಲೆ ಅನುಕಂಪದಿಂದ ನಿರ್ವಾಣದ ಯೋಚನೆ ಬದಿಗಿಟ್ಟು ಜೀವಿಗಳ ಹಿತದೃಷ್ಟಿಯಿಂದ ಅವರ ನಡುವೆ ಮತ್ತೆ ಮತ್ತೆ ದೇಹಧಾರಣೆ ಮಾಡುವ, ಅವರ ಕಾರ್ಯಗಳಲ್ಲಿ ನೆರವಾಗವ ಬೋಧಿಸತ್ವನಿಗೆ ಹಲವು ಪ್ರಕಾರಗಳುಂಟು. ಶಾಕ್ಯಮುನಿ ಬುದ್ಧನೇ ಸಂಬೋಧಿ ಒದಗುವ ಪೂರ್ವದಲ್ಲಿ ಸಾವಿರಾರು ಜನ್ಮ ಎತ್ತಿ ಒಂದೊಂದು ಪಾರಮಿತ ಅಭ್ಯಾಸ ಮಾಡಿ ಲೋಕಸಂಗ್ರಹ ಮಾಡಿದ ಕಥೆಗಳು ಜಾತಕದ ವಸ್ತು. ಈ ಬೋಧಿಸತ್ವರಲ್ಲಿ ಅವಲೋಕಿನ, ಮಂಜುಶ್ರೀ ಪ್ರಮುಖರು. ಮಹಾ ಕರುಣೆಯೇ ಮೈವೆತ್ತು ಬಂದ ಅವಲೋಕಿತೇಶ್ವರ ಚೀನಾ-ಜಪಾನ್ ದೇಶದ ಬೌದ್ಧ ಧರ್ಮದಲ್ಲಿ ಪ್ರಭಾವಶಾಲಿಯಾದ ದೇವತೆ, ಪ್ರಜ್ಞೆ ಮೂರ್ತಿಮಂತವಾಗಿ ಬರುವುದು ಮಂಜುಶ್ರೀಯಲ್ಲಿ. ಅಮಿತಾಭ ಬೋಧಿಸತ್ತ್ವ ಸುಖಾವತೀವ್ಯೂಹವೆಂಬ ಸ್ವರ್ಗದಲ್ಲಿದ್ದಾನೆಂದೂ ಮನುಷ್ಯರು ಅವನ ಅನುಕಂಪದಿಂದ ಈ ಸ್ವರ್ಗಕ್ಕೆ ತೆರಳಬಹುದೆಂದೂ ಮಹಾಯಾನದವರ ನಂಬಿಕೆ. (ನಮೋಮಿತಭಾಯ ಜಿನಾಯ ತೇ ಮುನೆ, ಸುಖಾವತೀಂ ಯಾಮಿ ಚ ತೇನು ಕಂಪಯಾ) ಎಂದರೆ ಶಾಕ್ಯಮುನಿ ಬುದ್ಧನನ್ನೇ ಭಾವಗಳಿಂದ, ಕಲ್ಪನೆಗಳಿಂದ ಹಿಗ್ಗಿಸಿ ಮಾಡಿದವು ಈ ಮೂರ್ತಿಗಳು.

ಬುದ್ಧನ ಪ್ರಭಾವ ಭಾರತೀಯ ಇತಿಹಾಸದಲ್ಲಿ ಒಂದು ಪರ್ವ ಕಾಲ. ಭಾರತೀಯ ದರ್ಶನ ದಾರಿ ಬದಲಾಯಿತು; ವೈಧಿಕಯುಗದಿಂದ ಒಂದು ಸ್ಪಷ್ಟವಾದ ಪ್ರಗತಿ ಕಾಣಬಂದಿತು. ಜನಜೀವನದಲ್ಲಿ ಬುದ್ಧನ ವ್ಯಕ್ತಿತ್ವ ಧ್ವನಿತವಾಯಿತು. ಭಿಕ್ಷುಗಳ ಮಹಾಸಂಘವೊಂದು ರೂಪು ತಳೆದು ನಾಡಿನಾದ್ಯಂತ ಬೌದ್ಧಧರ್ಮ ಪ್ರಸಾರ ಮಾಡಿತು. ಶಿಲ್ಪದಲ್ಲಿ, ಸಾಹಿತ್ಯದಲ್ಲಿ, ಚಿತ್ರಕಲೆಯಲ್ಲಿ ಬುದ್ಧನ ಸ್ಪೂರ್ತಿ ಮೂಡಿಬಂದಿತು. ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲಿ ಕೂಡ ಬುದ್ಧನ ವ್ಯಕ್ತಿತ್ವ ವಿಶೇಷವಾದ ಪ್ರಭಾವ ಬೀರಿತು. ಇಡೀ ಏಷ್ಯಾಖಂಡದಲ್ಲೇ ಬೌದ್ಧಧರ್ಮ ಹರಡಿದುದರ ಮುಖ್ಯ ಕಾರಣ ಬುದ್ಧನ ದಿವ್ಯ ವ್ಯಕ್ತಿತ್ವ.
ಬುದ್ಧನ ಸಂದೇಶ ಕಾಲಕ್ರಮದಲ್ಲಿ ಸಿಂಹಳ, ಬರ್ಮಾ, ಕೊರಿಯ, ಚೀನ, ಜಪಾನ್, ಟಿಬೆಟ್, ನೇಪಾಳ, ಇಂಡೋಚೀನ ಮುಂತಾದ ಹಲವು ರಾಷ್ಟ್ರಗಳಲ್ಲಿ ಹರಡಿತು. ಭಾರತದಲ್ಲಿ ಇವರ ಪ್ರಭಾವದಿಂದ ವೇದಾಂತ ದರ್ಶನದ ಹೊಸ ಯುಗ ಆರಂಭವಾಯಿತು. ವಿಷ್ಣುವಿನ ದಶಾವತಾರದಲ್ಲಿ ಬುದ್ಧನನ್ನು ಒಂದು ಅವತಾರವೆಂದು ಅಂಗೀಕರಿಸಿಕೊಂಡರು. ಜಗತ್ತಿನ ಸಂಸ್ಕøತಿಗೆ ಬುದ್ಧ ಭಾರತದೇಶದ ಉಜ್ಜ್ವಲ ಕಾಣಿಕೆಯೆಂದರೆ ಉತ್ಪ್ರೇಕ್ಷೆಯಲ್ಲ.						
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ